ಮೈಸೂರು

ಭಾರತದ ಭಾಷಾ ನೀತಿಯನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳುವಂತೆ ಕರವೇ ಮನವಿ

ಮೈಸೂರು,ಸೆ.14:- ಭಾರತದ ಭಾಷಾ ನೀತಿಯನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಒಕ್ಕೂಟ ಸರ್ಕಾರವು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿರುವುದು ದೇಶದ ಇತರ ಭಾಷೆಗಳಿಗೆ ಅನ್ಯಾಯವಾಗಿದೆ. ಭಾರತ ಬಹುಭಾಷೆ ಸಂಸ್ಕೃತಿ, ಧರ್ಮಗಳ ನಾಡು. ಈ ಬಹುತ್ವ ಉಳಿದರಷ್ಟೇ ಒಕ್ಕೂಟ ಉಳಿಯಲು ಸಾಧ್ಯ. ಒಕ್ಕೂಟ ವ್ಯವಸ್ಥೆಯ ಈ ಮೂಲಮಂತ್ರವನ್ನೇ ಸಂವಿಧಾನ ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಇಪ್ಪತ್ತೆರಡು ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಈ ಅವಕಾಶ ಈಗಾಗಲೇ ಇದ್ದು ಅದನ್ನು ಎಲ್ಲ ಭಾಷೆಗಳಿಗೆ ವಿಸ್ತರಿಸಬೇಕು. ಶಿಕ್ಷಣ, ಉದ್ಯೋಗ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ, ಹಕ್ಕುಗಳು ಇರಬೇಕು ಹಿಂದಿ ದಿವಸ, ಹಿಂದಿ ಸಪ್ತಾಹದಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಪ್ರತಿವರ್ಷ ಸೆ.14ರ ಹಿಂದಿ ದಿನಾಚರಣೆ ಕೊನೆಯಾಗಬೇಕು. ಯಾವ ಭಾಷೆಯನ್ನೂ ನಿರ್ಲಕ್ಷ್ಯಿಸಕೂಡದು ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: