ಪ್ರಮುಖ ಸುದ್ದಿ

ಮೈಸೂರು-ಚೆನ್ನೈ ನಡುವೆ ಓಡಲಿದೆ ಬುಲೆಟ್ ರೈಲು !

ದೇಶ( ನವದೆಹಲಿ)ಸೆ.15:- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮುಂಬೈ – ಅಹಮದಾಬಾದ್ ಬುಲೆಟ್ ರೈಲು ಯೋಜನೆ ಕೊರೊನಾ ಕಾರಣಕ್ಕೆ ವಿಳಂಬಗೊಂಡಿರುವ ಹೊರತಾಗಿಯೂ ಚೆನ್ನೈ-ಮೈಸೂರು ಮಾರ್ಗ ಸೇರಿದಂತೆ ದೇಶಾದ್ಯಂತ ಏಳು ಹೊಸ ಮಾರ್ಗಗಳಲ್ಲಿ ಬುಲೆಟ್ ರೈಲು ಯೋಜನೆಗಾಗಿ 10 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ, ದೆಹಲಿ-ಅಹಮ ದಾಬಾದ್, ಚೆನ್ನೈ-ಮೈಸೂರು, ದೆಹಲಿ-ಅಮೃತಸರ, ಮುಂಬೈ-ಹೈದರಾಬಾದ್ ಮತ್ತು ವಾರಣಾಸಿ-ಹೌರಾ ಮಾರ್ಗದಲ್ಲಿ ಹೈ-ಸ್ಪೀಡ್ ಬುಲೆಟ್ ರೈಲು ಯೋಜನೆ ಆರಂಭಿಸುವ ಚಿಂತನೆ ಕೇಂದ್ರ ಸರ್ಕಾರಕ್ಕಿದೆ. ಈ ಯೋಜನೆ ವ್ಯಾಪ್ತಿ 4,869 ಕಿ.ಮೀ.ಗಳಾಗಿದ್ದು, ಒಟ್ಟಾರೆ ಯೋಜನೆ ವೆಚ್ಚ 10 ಲಕ್ಷ ಕೋಟಿ ರೂ. (10 ಟ್ರಿಲಿಯನ್ ರೂ.) ಎಂದು ಅಂದಾಜಿಸಲಾಗಿದೆ. ಅಂದರೆ ಪ್ರತಿ ಕಿ.ಮೀ. ಕಾಮಗಾರಿಗೆ ಸುಮಾರು 213 ಕೋಟಿ ರೂ. ತಗುಲಬಹುದು. ಏಳು ಹೊಸ ಬುಲೆಟ್ ರೈಲು ಕಾರಿಡಾರ್ ಯೋಜನೆಗಳಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು – ಬೆಂಗಳೂರು – ಚೆನ್ನೈ ಹೈಸ್ಪೀಡ್ ಬುಲೆಟ್ ರೈಲು ಮುನ್ನೆಲೆಗೆ ಬಂದಿದೆ. ಬೆಂಗಳೂರು ಮೂಲಕ ಹಾದು ಹೋಗುವ 435 ಕಿ.ಮೀ. ಮೈಸೂರು-ಚೆನ್ನೈ ನಡುವೆ ಹೈ ಸ್ಪೀಡ್ ರೈಲು ಮಾರ್ಗ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಯೋಜನೆಗೆ ಬೇಕಾಗುವ ಭೂಸ್ವಾಧೀನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ)ಕ್ಕೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಹೈಸ್ಪೀಡ್ ರೈಲು ಮಾರ್ಗಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮೈಸೂರಿನಿಂದ ಬೆಂಗಳೂರಿಗೆ 30ರಿಂದ 45 ನಿಮಿಷದಲ್ಲಿ ಮತ್ತು 1 ಗಂಟೆ 30 ನಿಮಿಷದಲ್ಲಿ ಮೈಸೂರಿನಿಂದ ಚೆನ್ನೈಗೆ ತಲುಪಬಹುದಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: