ದೇಶಪ್ರಮುಖ ಸುದ್ದಿ

ವಿಶ್ವಬ್ಯಾಂಕ್ ನ ಉನ್ನತ ಅಧಿಕಾರಿ ಸ್ಥಾನಕ್ಕೆ ಭಾರತದ ಐಎಎಸ್ ಅಧಿಕಾರಿ ನೇಮಕ

ನವದೆಹಲಿ,ಸೆ.15-ವಿಶ್ವಬ್ಯಾಂಕ್‌ನ ಉನ್ನತ ಅಧಿಕಾರಿ ಸ್ಥಾನಕ್ಕೆ ಭಾರತದ ಐಎಎಸ್ ಅಧಿಕಾರಿಯೊಬ್ಬರು ನೇಮಕಗೊಂಡಿದ್ದಾರೆ.

ಅಮೆರಿಕದ ವಾಷಿಂಗ್ಟನ್ ನಲ್ಲಿರುವ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹರಿಯಾಣ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ರಾಜೇಶ್ ಖುಲ್ಲರ್ ಅವರನ್ನು ನೇಮಿಸಲಾಗಿದೆ.

ಕೇಂದ್ರ ಸಿಬ್ಬಂದಿ ಸಚಿವಾಲಯ ನೀಡಿರುವ ಆದೇಶದಲ್ಲಿ ಈ ಕುರಿತು ಮಾಹಿತಿ ನೀಡಿದೆ. ರಾಜೇಶ್ ಖುಲ್ಲರ್ ಅವರು ಮುಂದಿನ 3 ವರ್ಷಗಳ ಕಾಲ ವಿಶ್ವಬ್ಯಾಂಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಂದರೆ 2023ರ ಆಗಸ್ಟ್‌ 31ರವರೆಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

1984 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಖುಲ್ಲರ್, 1988ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ ಜಪಾನ್‌ನ ಟೋಕಿಯೊದ ನ್ಯಾಷನಲ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ (ಜಿಆರ್‌ಪಿಎಸ್) ನಿಂದ ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪದವಿ ಗಳಿಸಿದ್ದಾರೆ.

ಖುಲ್ಲರ್ ಅವರನ್ನು ಫೆಬ್ರವರಿ 2011 ರಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಇದಲ್ಲದೆ ಖುಲ್ಲರ್ ಅವರು ವೈರಲ್ ಮ್ಯಾಚ್‌ನ ಲೇಖಕರಾಗಿದ್ದಾರೆ.

ಕೇಂದ್ರ ಸಿಬ್ಬಂದಿ ಸಚಿವಾಲಯ ಮತ್ತೊಂದು ಆದೇಶ ಹೊರಡಿಸಿದ್ದು, ಮನಿಲಾದಲ್ಲಿರುವ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್ ನ (ಎಡಿಬಿ) ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ಸಮೀರ್ ಕುಮಾರ್ ಖರೆ ಅವರನ್ನು ನೇಮಕ ಮಾಡಿದೆ. ಇವರ ಅಧಿಕಾರಾವಧಿ 3 ವರ್ಷವಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: