ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಡ್ರಗ್ಸ್ ಪ್ರಕರಣ: ಸ್ಯಾಂಡಲ್ ವುಡ್ ತಾರಾ ಜೋಡಿ ದಿಗಂತ್, ಐಂದ್ರಿತಾಗೆ ಸಿಸಿಬಿ ನೋಟಿಸ್

ಬೆಂಗಳೂರು,ಸೆ.15-ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ತಾರಾ ಜೋಡಿ ನಟ ದಿಗಂತ್, ನಟಿ ಐಂದ್ರಿತಾ ರೇ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ.

ದಿಗಂತ್, ಐಂದ್ರಿತಾ ರೇ ಅವರಿಗೆ ನೋಟಿಸ್ ನೀಡಿರುವ ಸಿಸಿಬಿ ನಾಳೆ ಬೆಳಿಗ್ಗೆ 11 ಗಂಟೆಗೆ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ದಿಗಂತ್ ಹಾಗೂ ಐಂದ್ರಿತಾ ರೇ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ಬಂದ ನಂತರ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್​ ಫಾಝಿಲ್​ ಶಾಸಕ ಜಮೀರ್​ ಅಹ್ಮದ್​ರ ಆಪ್ತ, ಡ್ರಗ್ಸ್ ಕೇಸ್​ನ ಪ್ರಮುಖ ಆರೋಪಿ ಕೂಡ. ಫಾಝಿಲ್​ ಆಯೋಜಿಸುತ್ತಿದ್ದ ಕ್ಯಾಸಿನೋ ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ಚಿತ್ರನಟಿಯರಿಂದ ಮಾತನಾಡಿಸಿ ರಾಜಕಾರಣಿಗಳು ಮತ್ತು ಗಣ್ಯರ ಮಕ್ಕಳಿಗೆ ಆಹ್ವಾನ ನೀಡುತ್ತಿದ್ದ. ಇದೇ ರೀತಿ ಕನ್ನಡದ ‘ಮನಸಾರೆ’ ಬೆಡಗಿ ಐಂದ್ರಿತಾ ರೇ ಮೂಲಕವೂ ‘ಕೊಲೊಂಬೋಗೆ ನೀವೂ ಬನ್ನಿ, ನಾನು ಬರ್ತೀನಿ’ ಎಂದು ವಿಡಿಯೋ ಸಂದೇಶ ಮಾಡಿಸಿದ್ದ. ಇದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಐಂದ್ರಿತಾ ರೇ, ‘ಅದು ಮೂರು ವರ್ಷಗಳ ಹಿಂದಿನ ವಿಡಿಯೋ. ಸಿನಿಮಾ ಪ್ರಮೋಷನ್​ಗಾಗಿ ಶ್ರೀಲಂಕಾಗೆ ಹೋಗಿದ್ದೆ. ಸುಮಾರು-ನಟ-ನಟಿಯರು ಹೋಗಿದ್ದಾರೆ. ಸೆಲೆಬ್ರಿಟಿ ಆಗಿರೋದರಿಂದ ಪಾರ್ಟಿ ಬಗ್ಗೆ ಮಾತನಾಡಿಸಿದ್ದರು. ಆಗ ಫಾಝಿಲ್​ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಡ್ರಗ್ಸ್​ ದಂಧೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮತ್ತೊಬ್ಬ ನಟಿ ಸಂಜನಾ ಗ್ರಲಾನಿ ಸದ್ಯ ಸಿಸಿಬಿ ವಶದಲ್ಲಿದ್ದು, ಅವರ ವಿಚಾರಣೆ ನಡೆಯುತ್ತಿದೆ. (ಎಂ.ಎನ್)

 

 

Leave a Reply

comments

Related Articles

error: