ಮೈಸೂರು

ವಿಜಯ ವಿಠಲ ಕಾಲೇಜಿನಲ್ಲಿ ಸರ್. ಎಂ.ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆ

ಮೈಸೂರು,ಸೆ.15:- ಸರ್. ಎಂ.ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆಯನ್ನು ವಿಜಯ ವಿಠಲ ಕಾಲೇಜಿನಲ್ಲಿ ಆಚರಿಸಲಾಯಿತು.
ವಿಶ್ವೇಶ್ವರಯ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಸತ್ಯಪ್ರಸಾದ್ ಮತ್ತು ಉಪನ್ಯಾಸಕರು ಚಾಲನೆ ನೀಡಿದರು. ಸತ್ಯಪ್ರಸಾದ್ ಅವರು ಮಾತನಾಡಿ “ಭಾರತದ ಅಭಿವೃದ್ಧಿಗಾಗಿ ಶ್ರಮಿಸಿದ, ರೈತರ ಪಾಲಿನ ಭಾಗ್ಯದೇವತೆ ಮತ್ತು ಅತ್ಯಂತ ಸರಳ ಹಾಗೂ ಮೇರು ವ್ಯಕ್ತಿತ್ವದ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ‘ಭಾರತರತ್ನ’ ಸರ್ ಎಂ.ವಿ ಅವರ ಸಾಧನೆಗಳು ವಿಶ್ವದಲ್ಲೇ ಗೌರವಾನ್ವಿತವಾದದ್ದು. ಅವರ ವ್ಯಕ್ತಿತ್ವ ಮತ್ತು ಜೀವನಶೈಲಿಯನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಶಕ್ತಿಶಾಲಿ ಭಾರತದ ನಿರ್ಮಾಣ ಸಾಧ್ಯ” ಎಂದರು.
ಸರ್ ಎಂ.ವಿ ಅವರ ಸರಳತೆಯನ್ನು ವಿದ್ಯಾರ್ಥಿಗಳು ತಮ್ಮ ಬದುಕಲ್ಲಿ ಅನುಸರಿಸಬೇಕು. ಅವರ ಜೀವನಶೈಲಿಯಿಂದ ವಿದ್ಯಾರ್ಜನೆಗಾಗಿ ಅವರು ಶ್ರಮಿಸಿದ್ದನ್ನು ಮರೆಯುವಂತಿಲ್ಲ. ಇಂತಹ ಸಾಧಕರನ್ನು ಮತ್ತು ದೇಶದ ಔನ್ನತ್ಯಕ್ಕಾಗಿ ಶ್ರಮಿಸಿದ ಅವರ ಮೌಲ್ಯಗಳನ್ನು ಅರಿತು ಪಾಲಿಸಬೇಕು ಎಂದು ಎಂದರು. ಸರ್.ಎಂ.ವಿ. ಯವರು ನಿಜವಾದ ಅರ್ಥದಲ್ಲಿ ಭಾರತರತ್ನ, ಕರ್ಮಯೋಗಿ ಮತ್ತು ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದರು.
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತು ಬದುಕಿನುದ್ದಕ್ಕೂ ಕೆಲವೊಂದು ಆದರ್ಶಗಳನ್ನು ಇಟ್ಟುಕೊಂಡು ಬದುಕುವುದು ಅಗತ್ಯ. ನಾವು ಮಾಡುತ್ತಿರುವ ಕೆಲಸದಲ್ಲಿ ವೈಯುಕ್ತಿಕ ವಿಚಾರಗಳ ಬಗ್ಗೆ ಆಸ್ಥೆ ತೋರ್ಪಡಿಸದೇ ನಿಷ್ಠ್ಠೆ, ದಕ್ಷತೆಯಿಂದ ಕೆಲಸವನ್ನು ನಿರ್ವಹಿಸಬೇಕು. ಶಿಸ್ತು ಸಂಯಮ, ಶ್ರದ್ಧೆ ಇಟ್ಟುಕೊಂಡು ಅಹಂಕಾರವನ್ನು ತೊರೆದು ಕೆಲಸ ಕಿರಿದಾಗಿರಲಿ – ಹಿರಿದಾಗಿರಲಿ ನಿಷ್ಪಕ್ಷಪಾತವಾಗಿ ನಿಮ್ಮ ಕೆಲಸಕ್ಕೆ ನ್ಯಾಯ ಒದಗಿಸಬೇಕೆಂದರು.
ವಿದ್ಯಾರ್ಥಿಗಳು ಜೂಮ್ ಮೀಟಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರಾದ ಎಸ್.ಎಸ್. ರಮೇಶ್, ಕೆ.ಎಸ್. ಪ್ರದೀಪ್, ಲಿಂಗರಾಜು, ಶಮಂತ್, ಸಂಜಯ, ಜಯಗಿರಿಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: