ಮೈಸೂರು

ಸಮರ್ಪಣಾ ಟ್ರಸ್ಟ್ ವತಿಯಿಂದ ‘ಭಾರತರತ್ನ’ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

ಮೈಸೂರು, ಸೆ.15:- ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಇಂದು ‘ಭಾರತರತ್ನ’ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ‘ಇಂಜಿನಿಯರ್ ದಿನಾಚರಣೆ’ಯಾಗಿ ಆಚರಿಸಿ, ಹಿರಿಯ ಇಂಜಿನಿಯರ್‍ಗಳನ್ನು ಗೌರವಿಸಿ, ಅಭಿನಂದಿಸಲಾಯಿತು.
ಹಿರಿಯ ಸಿವಿಲ್ ಇಂಜಿನಿಯರ್ ಡಾ.ಡಿ.ವಿ.ಪ್ರಹ್ಲಾದ್ ರಾವ್‍ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ಇಂದು ನಾಡಿನಾದ್ಯಂತ ಅರ್ಥಪೂರ್ಣವಾಗಿ ‘ಇಂಜಿನಿಯರ್ ದಿನ’ವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ಸರ್ ಎಂ.ವಿ.ಯವರು ಪ್ರಾಮಾಣಿಕತೆಯೊಂದಿಗೆ ಉತ್ತುಂಗ ಶಿಖರಕ್ಕೆ ಏರಿದವರು. ಶಿಸ್ತು, ಸಂಯಮ, ತಾಳ್ಮೆ, ನೇರ ನಡೆಯ ನಿಷ್ಠುರವಾಗಿದ್ದರು. ತಾವು ಜೀವಿಸುವುದಕ್ಕಾಗಿ ಸಂಪಾದಿಸಬೇಕೇ ಹೊರತು, ಸಂಪಾದನೆಯೇ ಜೀವನದ ಮಾರ್ಗವಾಗಬಾರದು ಎಂದು ದೃಢವಾಗಿ ನಂಬಿದ್ದರು. ತಮ್ಮ ಜೇಬಿನಲ್ಲಿ ಯಾವಾಗಲೂ ಎರಡು ಪೆನ್ನು ಇರುತ್ತಿತ್ತು. ಒಂದು ತಮ್ಮ ಕಛೇರಿಯ ಕೆಲಸಕ್ಕೆ ಉಪಯೋಗಿಸುತ್ತಿದ್ದರೆ, ಇನ್ನೊಂದು ತಮ್ಮ ಖಾಸಗಿ ಅಂದರೆ ತಮ್ಮ ಸ್ವಂತ ಕೆಲಸಕ್ಕೆ ಉಪಯೋಗಿಸುತ್ತಿದ್ದರು. ಅದೇ ಅಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಕ್ಯಾಂಡಲ್‍ಗಳನ್ನು ಬಳಸುತ್ತಿದ್ದು, ಒಂದು ಸರ್ಕಾರಿ ಕೆಲಸಗಳಿಗೆ ಬಳಸುತ್ತಿದ್ದರೆ, ಮತ್ತೊಂದನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಸುತ್ತಿದ್ದರು. ಅಂದರೆ ಸರ್ಕಾರಿ ಸೇವಾ ಸೌಲಭ್ಯಗಳನ್ನು ಬದುಕಿನುದ್ದಕ್ಕೂ ಎಂದೆಂದಿಗೂ ಕೂಡ ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರಲಿಲ್ಲ ಎಂಬುದು ಸಾಬೀತಾಗಿರುತ್ತದೆ. ಸರ್ ಎಂ.ವಿ.ಯವರು ಹಣಕ್ಕೆ ಆಸೆ ಪಡದೇ, ಗುಣಮಟ್ಟಕ್ಕೆ, ಕಟ್ಟಡ ವಿನ್ಯಾಸಕ್ಕೆ ಆದ್ಯತೆ ನೀಡಿ, ತಮ್ಮ ಕಾರ್ಯವೈಖರಿಯನ್ನು ತೋರಿಸಿ, ಅಂದಿನ ಮಹಾರಾಜರುಗಳಿಂದ ಮೆಚ್ಚುಗೆ, ಶ್ಲಾಘನೆಯನ್ನು ಪಡೆದಿದ್ದಂತಹವರು. ಅವರು ಅಂದಿನ ಮಹಾರಾಜ ಕೃಷ್ಣರಾಜ ಒಡೆಯರ್‍ರವರ ಒತ್ತಾಯದ ಮೇರೆಗೆ ಮೈಸೂರು ಸಂಸ್ಥಾನಕ್ಕೆ ಬರಲು ಒಪ್ಪಿಕೊಂಡು 1990ರಲ್ಲಿ ಮೈಸೂರಿನ ಚೀಫ್ ಇಂಜಿನಿಯರ್ ಆಗಿ, ಕೆ.ಆರ್.ಎಸ್. ಅಣೆಕಟ್ಟು ಹಾಗೂ ಅನೇಕ ವಿದ್ಯುಚ್ಛಕ್ತಿ ಯೋಜನೆಗಳನ್ನು ಸಹಕಾರಗೊಳಿಸಿ, ಅಂದಿನ ಬ್ರಿಟೀಷ್ ಸರ್ಕಾರದ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾದ ಹಿರಿಯ ಸಿವಿಲ್ ಕಂಟ್ರಾಕ್ಟರ್ ಎಂ.ಆರ್.ರಮೇಶ್ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆ ಬರೀ ಇಂಜಿನಿಯರ್ ಕ್ಷೇತ್ರಕ್ಕಷ್ಟೇ ಮೀಸಲಾಗಿರಲಿಲ್ಲ. ಕಟ್ಟಡ ನಿರ್ಮಾಣ, ಸಹಕಾರಿ, ಬ್ಯಾಂಕಿಂಗ್, ಸಮಾಜ ಸುಧಾರಣೆ, ಶಿಕ್ಷಣ ಕ್ಷೇತ್ರ ಹೀಗೆ ಹತ್ತು ಹಲವು ಜಾಗೃತಿ ಮೂಡಿಸುವ ಕೆಲಸ, ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಅಪ್ರತಿಮ ಜ್ಞಾನವನ್ನು ಸಮಾಜಕ್ಕೆ ಧಾರೆ ಎರೆದ ಪ್ರಾತಃಸ್ಮರಣೀಯರು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಮರ್ಪಣಾ ಟ್ರಸ್ಟ್‍ನ ಗೌರವ ಖಜಾಂಚಿ ಹಾಗೂ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆಯವರು ಮಾತನಾಡಿ, ಬಡ ಕುಟುಂಬದಿಂದ ಬಂದ ಸರ್ ಎಂ.ವಿ.ಯವರು ಇಡೀ ದೇಶ ಇಂದಿಗೂ ಮೆಚ್ಚುವಂತೆ ನೂರಾರು ಯೋಜನೆಗಳನ್ನು ಜಾರಿಗೆ ತಂದು ಜನರ ಮಾನಸದಲ್ಲಿ ಶಾಶ್ವತವಾಗಿ ನೆಲೆಸಿದವರು ಸರ್ ಎಂ.ವಿಶ್ವೇಶ್ವರಯ್ಯನವರು. 30 ವರ್ಷಗಳ ಕಾಲ ಇಂಜಿನಿಯರ್ ಆಗಿ, 20 ವರ್ಷಗಳಿಗೂ ಮಿಗಿಲಾಗಿ ದಕ್ಷ ಹಾಗೂ ಪ್ರಾಮಾಣಿಕ ಆಡಳಿತಗಾರರಾಗಿ, ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಸರ್ ಎಂ.ವಿ. ಅವರನ್ನು ಅಂದಿನ ಸರ್ಕಾರ ‘ಭಾರತ ರತ್ನ’ ಎಂಬ ಸರ್ವ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ, ಗೌರವಿಸಿದ್ದನ್ನು ಸ್ಮರಿಸಿದರು.
ವೇದಿಕೆಯಲ್ಲಿ ಸಿವಿಲ್ ಇಂಜಿನಿಯರ್ ಹಾಗೂ ವ್ಯಾಲ್ಯೂಯರ್ ಕೆ.ಎಸ್.ನಾಗೇಂದ್ರ, ಸಿವಿಲ್ ಇಂಜಿನಿಯರ್ ಹಾಗೂ ಕನ್ಸಂಟಂಟ್ ವೈ.ಎನ್.ರಂಗನಾಥ್, ಸಮರ್ಪಣಾ ಟ್ರಸ್ಟ್‍ನ ಗೌರವ ಸಲಹೆಗಾರರಾದ ಶೋಭ, ಉದ್ಯಮಿ ಜಿನದತ್ತ ರಾಯ್ ಹಾಗೂ ಸಮಾಜ ಸೇವಕ ಹಾಗೂ ಟ್ರಸ್ಟ್ ಸದಸ್ಯ ಜಿ.ಪಿ.ಹರೀಶ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: