ಮೈಸೂರು

ದರೋಡೆ ಮಾಡಲು ಹೊಂಚು ಹಾಕಿದ್ದ ಎಂಟು ಮಂದಿ ಕುಖ್ಯಾತ ದರೋಡೆಕೋರರ ಬಂಧನ

ಮೈಸೂರು,ಸೆ.16:- ದರೋಡೆ ಮಾಡಲು ಹೊಂಚು ಹಾಕಿದ್ದ ಎಂಟು ಮಂದಿ ಕುಖ್ಯಾತ ದರೋಡೆಕೋರರನ್ನು ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಇಂದು ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಎಸ್ ಐ ಭವ್ಯ ಅವರು ಸೆ.9ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಭೋಗಲಿಂಗೇಶ್ವರ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಓಮ್ನಿ ಕಾರಿನ ಹತ್ತಿರ ಎಂಟು ವ್ಯಕ್ತಿಗಳು ನಿಂತಿದ್ದು ಅನುಮಾನ ಬಂದು ವಿಚಾರಿಸಿದ್ದಾರೆ. ಇವರು ಬೋಗಾದಿ ರಿಂಗ್ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಮತ್ತು ವಾಹನ ಸವಾರರನ್ನು ಹೆದರಿಸಿ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿರುವುದು ಖಚಿತವಾದ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತರು ಶರತ್ ಬಿನ್ ಸೋಮೇಗೌಡ, ಸುಮಂತ್ @ಸುಮೋ ಬಿನ್ ರಮೇಶ್, ಧರ್ಮೇಶ್ @ಕರಿಯ ಬಿನ್ ವೆಂಕಟೇಶ್, ದಿನೇಶ್ @ದಿನಿ ಬಿನ್ ಮರಿಸ್ವಾಮಿ, ಸುನಿಲ್ ಕುಮಾರ್ ಬಿನ್ ಈಶ್ವರಾಚಾರ್, ಶಶಾಂಕ್ @ತೇಜಸ್ @ಆಫೀಸಿಯಲ್ ಬಿನ್ ಸತ್ಯನಾರಾಯಣ್, ಕಾರ್ತೀಕ್ ಬಿನ್ ಶಿವಣ್ಣ, ಮಹದೇವ್ ಬಿನ್ ಚಂದ್ರೇಗೌಡ ಎಂದು ಇವರು ತಮ್ಮ ಹೆಸರನ್ನು ಪರಿಚಯಿಸಿಕೊಂಡಿದ್ದಾರೆ.
ಇವರನ್ನು ವಶಕ್ಕೆ ಪಡೆದು ಅವರಿಂದ 6ಸಾವಿರ ರೂ.ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಓಮ್ನಿ ಕಾರು (ಕೆಎ09ಎಂಜಿ385), 4ಬೈಕ್/ಸ್ಕೂಟರ್, 11ಮೊಬೈಲ್ ಫೋನ್ ಗಳು, ಒಂದು ಹಾಕಿ ಸ್ಟಿಕ್, ಎರಡು ಡ್ರಾಗನ್ ಚಾಕು, ಐದು ಮಂಕಿ ಕ್ಯಾಪ್, ಐದು ಖಾರದ ಪುಡಿ ಪ್ಯಾಕೇಟ್ ಗಳು, ಒಂದು ರಾಡ್, ಮೂರು ವಿಕೆಟ್ ಗಳು, ಒಂದು ಲಾಂಗ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಈ ಪ್ರಕರಣ ಪತ್ತೆಯಿಂದ ಒಟ್ಟು ಐದು ಪ್ರಕರಣಗಳು ಪತ್ತೆಯಾಗಿವೆ. ಸರಸ್ವತಿಪುರಂ ಪೊಲೀಸ್ ಠಾಣೆಯ ರಾಬರಿ ಪ್ರಕರಣ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ರಾಬರಿ ಪ್ರಕರಣ, ಲಕ್ಷ್ಮಿಪುರಂ ಪೊಲೀಸ್ ಠಾಣೆಯ ರಾಬರಿ ಪ್ರಕರಣ, ವಿಜಯನಗರ ಪೊಲೀಸ್ ಠಾಣೆಯ ರಾಬರಿ ಪ್ರಕರಣ, ಕೆ.ಆರ್.ಪೊಲೀಸ್ ಠಾಣೆ ವ್ಯಾಪ್ತಿಯ ಕೊಲೆಯತ್ನ ಪ್ರಕರಣ ಪತ್ತೆಯಾಗಿವೆ.
ಇವರ ಪತ್ತೆಕಾರ್ಯ ನನ್ನ ಹಾಗೂ ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಂ.ಎಸ್.ಪೂರ್ಣಚಂದ್ರತೇಜಸ್ವಿ ಉಸ್ತುವಾರಿಯಲ್ಲಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಐ ಆರ್.ವಿಜಯಕುಮಾರ್, ಕುವೆಂಪುನಗರ ಪೊಲೀಸ್ ಠಾಣೆಯ ಪಿಐ ಜಿ.ಸಿ.ರಾಜು, ಸರಸ್ವತಿಪುರಂಪೊಲೀಸ್ ಠಾಣೆಯ ಪಿಐ ಭವ್ಯ ಎನ್, ಅಪರಾಧ ವಿಭಾಗದ ಸಿಬ್ಬಂದಿ ಎಎಸ್ ಐ ಕರುಣಾಕರ ಬಸವರಾಜೇ ಅರಸ್, ಪ್ರಕಾಶ್, ರಾಘವೇಂದ್ರ, ಅರ್ಜುನ್, ಕುಮಾರ್, ಹರೀಶ್ ಕುಮಾರ್, ನಟರಾಜ ಮತ್ತು ಕೆ.ಆರ್.ಉಪವಿಭಾಗದ ಅಪರಾದ ಪತ್ತೆದಳದ ಸಿಬ್ಬಂದಿಗಳು ಆರೋಪಿಗಳನ್ನು ಮತ್ತು ಮಾಲುಗಳನ್ನು ಪತ್ತೆ ಮಾಡಲು ಶ್ರಮಿಸಿದ್ದು, ಅವರ ಕಾರ್ಯವನ್ನು ಶ್ಲಾಘಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: