ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಡ್ರಗ್ಸ್ ಪ್ರಕರಣ: ಸಿಸಿಬಿ ಕಚೇರಿಗೆ ಆಗಮಿಸಿದ ದಿಗಂತ್-ಐಂದ್ರಿತಾ

ಬೆಂಗಳೂರು,ಸೆ.16-ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಸ್ಟಾರ್ ದಂಪತಿ ನಟ ದಿಗಂತ್, ನಟಿ ಐಂದ್ರಿತಾ ರೇ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಅದರಂತೆ ಇಂದು ದಿಗಂತ್, ಐಂದ್ರಿತಾ ವಕೀಲರ ಜೊತೆಗೆ ವಿಚಾರಣೆಗೆ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.

ಇಬ್ಬರು ವಕೀಲರೊಂದಿಗೆ ದಿಗಂತ್, ಐಂದ್ರಿತಾ ಸಿಸಿಬಿ ಕಚೇರಿಗೆ ಆಗಮಿಸಿದ್ದು, ಸಿಸಿಬಿ ಇನ್​ಸ್ಪೆಕ್ಟರ್​ ಪುನೀತ್​ ಮತ್ತು ಅಂಜುಮಾಲಾ ನಾಯಕ್ ತಂಡ ಇವರಿಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ. ಇವರಿಬ್ಬರೊಂದಿಗೆ ಆಗಮಿಸಿರುವ ವಕೀಲರಿಗೆ ವಿಚಾರಣೆ ಆಗುವವರೆಗೆ ಹೊರಗಿರುವಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ.

ನಿನ್ನೆ ಸಿಸಿಬಿ ನೋಟಿಸ್ ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಐಂದ್ರಿತಾ, ಸಿಸಿಬಿ ಜಾರಿ ಮಾಡಿರುವ ನೋಟಿಸ್​ ಅನ್ನು ವಾಟ್ಸ್‌ ಆ್ಯಪ್ ಮೂಲಕ ಸ್ವೀಕರಿಸಿದ್ದೇವೆ. ನಾಳೆ(ಬುಧವಾರ) ಬೆಳಿಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ನಾವಿಬ್ಬರೂ ಆಗಮಿಸಲಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದಿದ್ದರು.

ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿಗೊಳಿಸಿದ್ದ ವೇಳೆ ದಿಗಂತ್, ಐಂದ್ರಿತಾ ಬೆಂಗಳೂರಿನಲ್ಲಿ ಇರಲಿಲ್ಲ. ಕೇರಳದಲ್ಲಿ ಜಾಲಿ ಟ್ರಿಪ್ ನಲ್ಲಿದ್ದರು. ನೋಟಿಸ್ ಸಿಕ್ಕ ಬಳಿಕ ವಿಚಾರಣೆಗೆ ಹಾಜರಾಗುವ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ಜತೆ ಐಂದ್ರಿತಾ ಇರುವ ಫೋಟೋಗಳು ಈಗಾಗಲೇ ವೈರಲ್ ಆಗಿದ್ದವು. ಅದರ ವಿವರಗಳು ಮಾಧ್ಯಮಗಳಲ್ಲಿ ಹರಿದಾಡತೊಡಗಿದಾಗ ಸ್ವತಃ ಐಂದ್ರಿತಾ ಫೋನ್ ಮೂಲಕ ಸಮಜಾಯಿಷಿ ನೀಡಿದ್ದರು. (ಎಂ.ಎನ್)

 

Leave a Reply

comments

Related Articles

error: