ಕರ್ನಾಟಕಮನರಂಜನೆ

ಮಾರಾಟವಾಗುತ್ತಿದೆ ನಟಿ ರಾಗಿಣಿ ದ್ವಿವೇದಿಯ ಪ್ರೀತಿಯ ಮನೆ

ಬೆಂಗಳೂರು,ಸೆ.16-ಡ್ರಗ್ಸ್ ಮಾಫಿಯಾದಲ್ಲಿ ನಂಟು ಹೊಂದಿರುವ ಆರೋಪದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಅವರ ಮನೆ ಮಾರಾಟವಾಗುತ್ತಿದೆ. ಆನ್‌ಲೈನ್‌ ಮೂಲಕ ಫ್ಲಾಟ್‌ ಅನ್ನು ಮಾರಾಟಕ್ಕೆ ಇಡಲಾಗಿದೆ.

ರಾಗಿಣಿ ವಾಸವಿದ್ದ ಯಲಹಂಕದ ಫ್ಲಾಟ್ ಅನ್ನು ಪೋಷಕರು ಮಾರಾಟಕ್ಕಿಟ್ಟಿದ್ದಾರೆ. ಬ್ಯಾಂಕ್‌ನಿಂದ ಸಾಲ ಪಡೆದುಕೊಂಡು ರಾಗಿಣಿ ಈ ಫ್ಲಾಟ್‌ ಖರೀದಿಸಿದ್ದರು. ಆದರೆ ಈಗ ಅವರಿಗೆ ಸಂಕಷ್ಟ ಎದುರಾಗಿದ್ದು, ಅದರಿಂದ ಹೊರಬರಲು ಹಣಕಾಸಿನ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಫ್ಲಾಟ್‌ ಮಾರಾಟ ಮಾಡಿ, ಅದರಿಂದ ಬರುವ ಹಣದಲ್ಲಿ ಬ್ಯಾಂಕ್‌ನ ಸಾಲ ತೀರಿಸುವುದರ ಜೊತೆಗೆ ಮಗಳಿಗೆ ಕಾನೂನು ಹೋರಾಟದಲ್ಲಿ ನೆರವಾಗಲು ರಾಗಿಣಿ ತಂದೆ-ತಾಯಿ ಮುಂದಾಗಿದ್ದಾರೆ.

ಮಗಳನ್ನು ಕಷ್ಟದಿಂದ ಪಾರು ಮಾಡಲು ನಾವು ಮನೆ ಮಾರಾಟ ಮಾಡುತ್ತಿರುವುದು ನಿಜ.ಎಲ್ಲರಂತೆಯೇ ನಮಗೂ ಈಗ ಖರ್ಚು ವೆಚ್ಚ ನಿಭಾಯಿಸುವುದು ಕಷ್ಟ ಆಗುತ್ತಿದೆ. ಮನೆ ಮಾರಾಟ ಮಾಡುತ್ತಿದ್ದೇವೆ ಎಂಬುದರಲ್ಲಿ ಯಾವುದೇ ಅವಮಾನ ಇಲ್ಲ. ನಮ್ಮ ಮಗಳನ್ನು ಕಾಪಾಡುವುದೇ ನಮಗೆ ಮುಖ್ಯ. ಆಕೆ ಘನತೆಯೊಂದಿಗೆ ಜೈಲಿನಿಂದ ಹೊರಬರಬೇಕು ಎಂದು ರಾಗಿಣಿ ತಾಯಿ ಹೇಳಿದ್ದಾರೆ.

ಒಂದು ಕೋಟಿ ರೂ. ಸಾಲ ಮಾಡಲಾಗಿತ್ತು. ಅದರಲ್ಲಿ ಇನ್ನೂ 80 ಲಕ್ಷ ರೂ. ಬಾಕಿ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮನೆಯನ್ನು ಹೊರತುಪಡಿಸಿ ಬೇರೆ ಯಾವುದೇ ಆಸ್ತಿಯೂ ನಮ್ಮ ಬಳಿ ಇಲ್ಲ ಎಂದು ರಾಗಿಣಿ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ರಾಗಿಣಿಗೆ ತುಂಬಾ ಇಷ್ಟವಾದ ಮನೆಯಂತೆ. ತುಂಬಾ ಪ್ರೀತಿಯಿಂದ ಖರೀದಿಸಿದ ಮನೆಯಂತೆ. ಆದರೀಗ ಹಣವಿಲ್ಲ ಎನ್ನುವ ಕಾರಣಕ್ಕೆ ಮಾರಾಟ ಮಾಡುತ್ತಿದ್ದಾರೆ.

ಪ್ರಸ್ತುತ ರಾಗಿಣಿ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅವರನ್ನು ಇಂದು ಎನ್‌ಡಿಪಿಎಸ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅವರ ಜಾಮೀನು ಅರ್ಜಿ ವಿಚಾರಣೆ ಕೂಡ ಇಂದೇ ನಡೆಯಲಿದೆ. (ಎಂ.ಎನ್)

 

Leave a Reply

comments

Related Articles

error: