ಮೈಸೂರು

ರೈತ-ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ಪ್ರತಿಭಟನೆ : ಮನವಿ ಸ್ವೀಕರಿಸಿದ ಶಾಸಕ ನಾಗೇಂದ್ರರಿಂದ ಸರ್ಕಾರಕ್ಕೆ ತಲುಪಿಸುವ ಭರವಸೆ

ಮೈಸೂರು,ಸೆ.16:- ರೈತ-ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ರೈತ-ದಲಿತ-ಕಾರ್ಮಿಕ ಸಂಘಟನೆಗಳು ಐಕ್ಯ ಹೋರಾಟ ನಡೆಸುತ್ತಿದ್ದು, ಇಂದೂ ಕೂಡ ಜಲದರ್ಶನಿ ಎದುರು ಪ್ರತಿಭಟನೆ ನಡೆಸಿವೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ದೇಶದ ಜನತೆ ಕೊರೋನಾ ಸಂಕಷ್ಟದಲ್ಲಿ ನರಳುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತ ಸಂಕುಲವನ್ನೇ ನಾಶ ಮಾಡುವ ಮೂಲಕ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿದ್ದು, ಸೆ.21ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕಾರಕ್ಕಾಗಿ ಮಂಡಿಸುತ್ತಿದೆ. ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ 2020, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ2020, ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುವ ಕಾರ್ಖಾನೆಗಳ ಕಾಯ್ದೆ ತಿದ್ದುಪಡಿ, ಇತರೆ ಕಾಯ್ದೆಗಳ ತಿದ್ದುಪಡಿ ಈ ಮೂರು ಸುಗ್ರೀವಾಜ್ಞೆಗಳು ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನಸಮೂಹಗಳ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಉಂಟುಮಾಡಬಲ್ಲ ಸುಗ್ರೀವಾಜ್ಞೆಗಳಾಗಿವೆ ಎಂದರು.
ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜನ್ನು ಬಹುರಾಷ್ಟ್ರೀಯ ಕಂಪನೆಗಳ ವಶಕ್ಕೆ ನೀಡಲು ಹೊರಟಿದೆ. ಇದರಿಂದ ಪಂಪ್ ಸೆಟ್ ಬಳಸುತ್ತಿರುವ ರೈತರಿಗೆ ದೊರೆಯುತ್ತಿದ್ದ ಉಚಿತ ವಿದ್ಯುತ್ ನಿಲ್ಲಲಿದೆ. ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರು ಹಾಗೂ ಗುಡಿಕೈಗಾರಿಕೆಗಳಿಗೆ ಸಿಗುತ್ತಿದ್ದ ವಿದ್ಯುತ್ ಸೌಲಭ್ಯ . ಕಡಿತವಾಗಲಿದೆ.ಈ ತಿದ್ದುಪಡಿಗೆ ರಾಜ್ಯ ಸರ್ಕಾರ ಒಪ್ಪದಂತೆ ಒತ್ತಾಯಿಸಬೇಕು ಎಂದರು.
ಈ ಸುಗ್ರೀವಾಜ್ಞೆಗಳು ಆರ್ಥಿಕ ಅಸಮಾನತೆಯನ್ನು ತೀವ್ರಗೊಳಿಸುವುದಲ್ಲದೆ ರೈತ, ದಲಿತ, ಕಾರ್ಮಿಕ ಹೀಗೆ ವಿವಿಧ ಸಾಮಾಜಿಕ ಜನ ಸಮೂಹಗಳನ್ನು ಮತ್ತಷ್ಟು ದಮಕ್ಕೀಡು ಮಾಡುವಂತಹ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತವೆ. ಹೀಗೆ ಒಟ್ಟಾರೆಯಾಗಿ ಸಾರ್ವಭೌಮತ್ವ, ಸ್ವಾತಂತ್ರ್ಯ, ಸಮಾನತೆ, ಒಕ್ಕೂಟತತ್ವ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮುಂತಾದ ನಮ್ಮ ಸಂವಿಧಾನ ಮೂಲಭೂತ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಗೆ ಅಂಗೀಕಾರಕ್ಕೆ ಚರ್ಚೆಗೆ ತರುತ್ತಿರುವ ಈ ಸುಗ್ರೀವಾಜ್ಞೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ಶಾಸನ ಆಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕುರುಬೂರು ಶಾಂತಕುಮಾರ್, ಹೊಸಕೋಟೆ ಬಸವರಾಜು, ಹೊಸೂರು ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಆಗಮಿಸಿದ್ದು, ರೈತ ಮುಖಂಡರು ಶಾಸಕರಿಗೆ ಮನವಿ ಪತ್ರ ನೀಡಿದರು. ನಮ್ಮ ಪರ ನೀವು ಅಧಿವೇಶನದಲ್ಲಿ ಮಾತನಾಡಬೇಕು. ತಾವು ಯಾವುದೇ ಕಾರಣಕ್ಕೂ ಈ ಕಾಯ್ದೆಗಳು ಜಾರಿಗೆ ತರಲು ಬಿಡಬಾರದು. ನಾವು ಈಗಾಗಾಲೇ ಹಲವು ಹೋರಾಟಗಳನ್ನು ಮಾಡಿದ್ದೇವೆ. ಆದರೂ ಕೇಂದ್ರ ಸರ್ಕಾರ ಚರ್ಚೆ ಮಾಡದೆ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ನೀವು ಅಧಿವೇಶನದಲ್ಲಿ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಮನವಿಯನ್ನು ಸ್ವೀಕರಿಸಿದ ಶಾಸಕ ನಾಗೇಂದ್ರ ಸರ್ಕಾರಕ್ಕೆ ತಲುಪಿಸುವ ಭರವಸೆ ನೀಡಿದರು.
(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: