ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಡ್ರಗ್ಸ್ ಪ್ರಕರಣ: ಸ್ಟಾರ್ ದಂಪತಿ ದಿಗಂತ್-ಐಂದ್ರಿತಾ ವಿಚಾರಣೆ ಅಂತ್ಯ

ಬೆಂಗಳೂರು,ಸೆ.16-ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್, ನಟಿ ಐಂದ್ರಿತಾ ರೇ ಅವರ ಇಂದಿನ ವಿಚಾರಣೆ ಅಂತ್ಯಗೊಂಡಿದ್ದು, ಸಿಸಿಬಿ ಕಚೇರಿಯಿಂದ ದಂಪತಿಗಳು ಹೊರಬಂದಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 11.15ಕ್ಕೆ ವಿಚಾರಣೆಗೆ ಹಾಜರಾದ ದಿಗಂತ್, ಐಂದ್ರಿತಾ ಅವರನ್ನು ಸುಮಾರು ನಾಲ್ಕುವರೆ ಗಂಟೆಗಳ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಗೆ ಇಬ್ಬರು ಸಹಕರಿಸಿದ್ದಾರೆ. ವಿಚಾರಣೆ ಮುಗಿದ ಬಳಿಕ ಮನೆಯತ್ತ ಹೊರಟ್ಟಿದ್ದಾರೆ.

ವಿಚಾರಣೆ ಮುಗಿಸಿ ಸಿಸಿಬಿ ಕಚೇರಿಯಿಂದ ಹೊರಬಂದ ದಿಗಂತ್, ಐಂದ್ರಿತಾ ಮಾಧ್ಯಮದವರೊಂದಿಗೆ ಮಾತನಾಡಿ, ಸಿಸಿಬಿ ತನಿಖೆಗೆ ನಾವು ಸಹಕಾರ ನೀಡುತ್ತೇವೆ. ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇವೆ ಎಂದು ಹೇಳಿದ್ದಾರೆ.

ವಿಚಾರಣೆ ಕುರಿತು ಮಾಹಿತಿ ನೀಡಿದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ದಿಗಂತ್, ಐಂದ್ರಿತಾ ಅವರ ಮೊದಲ ಹಂತದ ವಿಚಾರಣೆ ಮುಗಿದಿದೆ. ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಸದ್ಯಕ್ಕೆ ಇಬ್ಬರೂ ಸಿಸಿಬಿ ಕಚೇರಿಯಿಂದ ತೆರಳಿದ್ದಾರೆ. ಮತ್ತೆ ವಿಚಾರಣೆ ಅಗತ್ಯವಿದ್ದರೆ ದಿನಾಂಕ ನಿಗದಿಗೊಳಿಸಿ ಸಮನ್ಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಇಬ್ಬರು ಉತ್ತರ ನೀಡಿದ್ದು, ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗುತ್ತಿದೆ. ಪಾರ್ಟಿಗಳಿಗೆ ಹೋಗಿದ್ದು ನಿಜ. ಆದರೆ ಡ್ರಗ್ಸ್ ಸೇವಿಸಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನಲೆಯಲ್ಲಿ ಕೇರಳದಲ್ಲಿದ್ದ ದಂಪತಿ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿತ್ತು. ಇಂದು ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದರು. (ಎಂ.ಎನ್)

 

Leave a Reply

comments

Related Articles

error: