ದೇಶಪ್ರಮುಖ ಸುದ್ದಿ

ಸೆ.18 ರಿಂದ ಎಸ್ ಬಿಐ ಎಟಿಎಂ ವಿತ್ ಡ್ರಾ ನಿಯಮ ಬದಲಾವಣೆ: 10 ಸಾವಿರಕ್ಕಿಂತ ಮೇಲ್ಪಟ್ಟ ವ್ಯವಹಾರಕ್ಕೆ ಓಟಿಪಿ ಕಡ್ಡಾಯ

ನವದೆಹಲಿ,ಸೆ.16-ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟಿಪಿ ಆಧಾರಿತ ಎಟಿಎಂ ನಗದು ಹಿಂಪಡೆಯುವ ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಿದೆ.

24X7 ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಲಿರುವ ಈ ಸೌಲಭ್ಯವು ಸೆ.18ರಿಂದ ದೇಶಾದ್ಯಂತದ ಎಲ್ಲ ಎಸ್‌ಬಿಐ ಎಟಿಎಂಗಳಲ್ಲಿ ಬಳಕೆಗೆ ಬರಲಿದೆ.

ಈ ನೂತನ ನಿಯಮದನ್ವಯ ಇನ್ನು ಮುಂದೆ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್​ಡ್ರಾ ಮಾಡಿಕೊಳ್ಳಬಯಸಿದರೆ, ನಿಮ್ಮ ಫೋನ್​ಗೆ ಓಟಿಪಿ (ಒನ್​ಟೈಂ ಪಾಸ್​ವರ್ಡ್​) ಬರುತ್ತದೆ. ನೀವು ಬ್ಯಾಂಕ್​ಗೆ ನೋಂದಣಿ ಮಾಡಿರುವ ಮೊಬೈಲ್​ ಸಂಖ್ಯೆಗೆ ಈ ಓಟಿಪಿ ಬರುತ್ತದೆ. ಅದನ್ನು ಎಟಿಎಂ ಮಷಿನ್​ ಮೇಲೆ ನಮೂದು ಮಾಡಿದ ಮೇಲಷ್ಟೇ ಹಣವನ್ನು ಪಡೆಯಲು ಸಾಧ್ಯ.

ಆದ್ದರಿಂದ ಇನ್ನುಮುಂದೆ ಎಸ್​ಬಿಐನ ಯಾವುದೇ ಎಟಿಎಂಗೆ ಹೋಗಬೇಕಿದ್ದಲ್ಲಿ, 10 ಸಾವಿರ ರೂಪಾಯಿಗಿಂತ ಅಧಿಕ ಹಣವನ್ನು ವಿತ್​ಡ್ರಾ ಮಾಡುವುದೇ ಆಗಿದ್ದಲ್ಲಿ ಮೊಬೈಲ್​ ಫೋನ್​ ಅನ್ನು ಕಡ್ಡಾಯವಾಗಿ ಒಯ್ಯಲೇಬೇಕು.

ಈ ಮೊದಲು ರಾತ್ರಿ ಎಂಟು ಗಂಟೆಯಿಂದ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಳ್ಳುವ ಸಂದರ್ಭ ಓಟಿಪಿ ಅಗತ್ಯ ಇತ್ತು. ಜನವರಿ 1ರಿಂದ ಬ್ಯಾಂಕ್‌ ಈ ನಿಯಮವನ್ನು ಜಾರಿಗೆ ತಂದಿತ್ತು. ಇದನ್ನೀಗ 24X7 ಮಾದರಿಗೆ ವಿಸ್ತರಿಸಿದೆ.

ಆದರೆ ಈ ನಿಯಮ ಎಸ್​ಬಿಐನ ಎಟಿಎಂ ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್​ಗಳ ಎಟಿಎಂನಿಂದ ಹಣವನ್ನು ವಿತ್​ಡ್ರಾ ಮಾಡುವಾಗ ಅನ್ವಯ ಆಗುವುದಿಲ್ಲ. ಇದರ ಅರ್ಥ ಒಂದು ವೇಳೆ ನೀವು ಎಸ್​ಬಿಐ ಕಾರ್ಡ್​ ಹೊಂದಿದ್ದರೆ, ಬೇರೆ ಬ್ಯಾಂಕ್​ನ ಎಟಿಎಂನಿಂದ ಹಣವನ್ನು ಡ್ರಾ ಮಾಡುವುದಿದ್ದರೆ, ಎಷ್ಟು ಹಣ ಪಡೆದರೂ ಓಟಿಪಿ ಬರುವುದಿಲ್ಲ. ಏಕೆಂದರೆ ಇದು ಸದ್ಯ ಬೇರೆ ಬ್ಯಾಂಕ್​ಗಳಿಗೆ ಅನ್ವಯ ಆಗಿಲ್ಲ.

ತಾಂತ್ರಿಕ ಸುಧಾರಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಎಸ್‌ಬಿಐ ಈ ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕರ ಸುರಕ್ಷತೆಗೆ ಬಹಳ ಮೊದಲಿನಿಂದಲೂ ಎಸ್‌ಬಿಐ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಈ ವಿಶೇಷ ಅಂಶ ಭದ್ರತಾ ಮಟ್ಟವನ್ನು ಮತ್ತಷ್ಟು ಬಲಪಡಿಸುತ್ತದೆ. ಎಸ್‌ಬಿಐ ಡೆಬಿಟ್‌ ಕಾರ್ಡ್‌ ಹೊಂದಿರುವವರು ಬ್ಯಾಂಕ್‌ ವಂಚನೆಗಳು, ಅನಧಿಕೃತ ಹಿಂಪಡೆಯುವಿಕೆ, ಕಾರ್ಡ್‌ ಸ್ಕಿಮ್ಮಿಂಗ್‌ ಮೊದಲಾದ ಅಪಾಯಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. (ಏಜೆನ್ಸೀಸ್, ಎಂ.ಎನ್)

 

 

Leave a Reply

comments

Related Articles

error: