ದೇಶಪ್ರಮುಖ ಸುದ್ದಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸೆ.30ಕ್ಕೆ ತೀರ್ಪು; ಅಡ್ವಾಣಿ ಸೇರಿ ಎಲ್ಲ ಆರೋಪಿಗಳು ಕೋರ್ಟ್ ನಲ್ಲಿರಲು ಸೂಚನೆ

ಲಖನೌ,ಸೆ.16-ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಸೆ.30ರಂದು ಅಂತಿಮ ತೀರ್ಪು ನೀಡಲಿದೆ.

28 ವರ್ಷಗಳ ಹಳೆಯದಾಗಿರುವ ಪ್ರಕರಣದ ತೀರ್ಪು ಸೆ.30 ರಂದು ಹೊರಬೀಳಲಿದ್ದು, ಅಂದು ಇಡೀ ದೇಶದ ಕಣ್ಣು ಲಖನೌನ ವಿಶೇಷ ಸಿಬಿಐ ನ್ಯಾಯಾಲಯದ ಮೇಲಿರಲಿದೆ.

ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌.ಕೆ.ಯಾದವ್‌ ತೀರ್ಪು ನೀಡಲಿದ್ದು, ಅಂದು ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ. ಬಿಜೆಪಿಯ ಪ್ರಮುಖ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್‌ ಜೋಶಿ, ಕಲ್ಯಾಣ್‌ ಸಿಂಗ್‌, ಉಮಾ ಭಾರತಿ ಮತ್ತು ವಿನಯ್‌ ಕಟಿಯಾರ್‌ ಸೇರಿದಂತೆ 32 ಆರೋಪಿಗಳು ಇದ್ದಾರೆ.

ಸೆ.1ರಂದು ಘಟನೆಗೆ ಸಂಬಂಧಿಸಿದಂತೆ ವಾದ, ಪ್ರತಿವಾದಗಳು ಮುಗಿದಿವೆ. ವಿಶೇಷ ನ್ಯಾಯಾಧೀಶರು ತೀರ್ಪು ಬರೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಸಿಬಿಐ ಪರ ವಕೀಲ ಲಲಿತ್‌ ಸಿಂಗ್‌ ತಿಳಿಸಿದ್ದಾರೆ. 351 ಸಾಕ್ಷಿದಾರರನ್ನು ಹಾಗೂ 600 ದಾಖಲಾತಿ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಿದೆ.

ಏನಿದು ಪ್ರಕರಣ: 1992ರ ಡಿಸೆಂಬರ್‌ 6 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ನಿರ್ಮಿತ ಮಸೀದಿಯನ್ನು ಕಾರಸೇವಕರು ಧ್ವಂಸಗೊಳಿಸಿದ್ದರು. ದೇಶಾದ್ಯಂತ ಕೋಮು ಸಂಘರ್ಷ ಭುಗಿಲೆದ್ದಿತ್ತು. ಮುಂಬೈ ಬಾಂಬ್‌ ಸ್ಫೋಟ, ಗೋಧ್ರಾ ದಹನ, ಗುಜರಾತ್‌ ಗಲಭೆಗಳು ಕೂಡ ನಡೆದದ್ದು ಇದೇ ಸಂದರ್ಭದಲ್ಲಿ.

ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಅಂದರೆ 1990ರಲ್ಲಿ ಗೋಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್​ಶೀಟ್​ನಲ್ಲಿ ಹೇಳಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ 92 ವರ್ಷದ ಎಲ್‌.ಕೆ.ಅಡ್ವಾಣಿಯವರು ಜುಲೈ 24ರಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದರು. ಇನ್ನು, ಮುರುಳಿ ಮನೋಹರ್‌ ಜೋಷಿ ಜುಲೈ 23ರಂದು ತಮ್ಮ ಹೇಳಿಕೆ ದಾಖಲಿಸಿದ್ದು, ಇಬ್ಬರೂ ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪಗಳನ್ನು ನಿರಾಕರಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: