ಪ್ರಮುಖ ಸುದ್ದಿಮೈಸೂರು

ದಲಿತ ಸಮುದಾಯದವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ, ಗೆಲುವು ನಮ್ಮದೇ : ಯಡಿಯೂರಪ್ಪ ವಿಶ್ವಾಸ

ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಆರತಿ ಎತ್ತಿ ಸ್ವಾಗತಿಸಿದರಲ್ಲದೇ ಜಯಘೋಷಗಳು ಮೊಳಗಿದವು. ಬದನವಾಳು ಗ್ರಾಮ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಸೂಕ್ಷ್ಮತೆಯನ್ನು ಅರಿತು ಯಡಿಯೂರಪ್ಪನವರು ಉಪ ಚುನಾವಣೆಯ ಪ್ರಚಾರ ಆರಂಭವಾದ ದಿನದಿಂದ ಮೂರನೇ ಬಾರಿಗೆ ಸದರಿ ಗ್ರಾಮಕ್ಕೆ ಭೇಟಿ ನೀಡಿದ್ದರು.

ಜಾತಿ, ಮತ ಬದಿಗಿಟ್ಟು ಗ್ರಾಮದ ಎಲ್ಲಾ ಬೀದಿಗಳಲ್ಲೂ ತೆರೆದ ವಾಹನದಲ್ಲಿ ಹಾಗೂ ಪಾದಯಾತ್ರೆಯ ಮೂಲಕ ಸಂಚರಿಸಿ ತಮ್ಮ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಅವರ ಪರ ಮತಯಾಚನೆ ಮಾಡಿದ ಯಡಿಯೂರಪ್ಪ ಮತ್ತು ಅವರೊಂದಿಗಿದ್ದ ಬಿಜೆಪಿ ನಾಯಕರನ್ನು ಗ್ರಾಮದ ನಿವಾಸಿಗಳು ಪಟಾಕಿ ಸಿಡಿಸಿ, ಬಾಣಬಿರುಸುಗಳನ್ನು ಹಾರಿಸಿ ಸಂಭ್ರಮದಿಂದ ಸ್ವಾಗತಿಸಿದರು. 
ಅಲ್ಲಿನ ಹೆಂಗಳೆಯರು ಯಡಿಯೂರಪ್ಪ ಅವರಿಗೆ ಕುಂಕುಮಾರತಿ ಎತ್ತಿ, ಕೆಂಪು ನೀರನ್ನು ಮಣ್ಣಿಗೆ ಸುರಿದು ದೃಷ್ಟಿ ನಿವಾಳಿಸಿದರು. ಯುವಕರು ಜಯಘೋಷ ಮಾಡುತ್ತ ಮುನ್ನಡೆದರೆ ಅವರೊಂದಿಗೆ ಊರ ಪುಟ್ಟ ಮಕ್ಕಳು ಬಿಜೆಪಿ ಬಾವುಟಗಳನ್ನು ಹಿಡಿದು, ಟೊಪ್ಪಿ ಧರಿಸಿ ಸಂತಸದಿಂದ ಪುಟಿಯುತ್ತಾ ಸಾಗಿದರು. 
ಅವರೆಲ್ಲರ ಅಭಿಮಾನ, ಆತ್ಮೀಯತೆ ಕಂಡು ಪುಳಕಿತರಾದ ಯಡಿಯೂರಪ್ಪ ಅವರು ನಿಮ್ಮೆಲ್ಲರ ಭಾವನೆ ನಮಗೆ ಅರ್ಥವಾಗುತ್ತದೆ. ನಿಮ್ಮಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂಬುದನ್ನು ಅರಿತಿದ್ದೇವೆ. ಮರೆಯದೇ ಬಂದು ಮತ ಹಾಕಿ ನಮ್ಮನ್ನು ಆಶೀರ್ವದಿಸಿ ಎಂದು ಕೈಮುಗಿದು ಕೋರಿದರು. . 
ಚುನಾವಣೆಯ ಸಮಯದಲ್ಲಿ ಕೆಲವರು ಅಲ್ಲಲ್ಲಿ ಅಪಪ್ರಚಾರದ ಬೆಂಕಿ ಹಚ್ಚುತ್ತಿದ್ದಾರೆ. ಆದರೆ ಬೆಂಕಿ ನಮ್ಮನ್ನು ಸುಡದು ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. 
ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ನವರು ನನ್ನ ಬಗ್ಗೆ, ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಾ ತಿರುಗುತ್ತಿದ್ದಾರೆ. ಆದರೆ ಅದರಿಂದ ನಮಗೇನೂ ತೊಂದರೆಯಿಲ್ಲ. ದಲಿತ ಸಮುದಾಯದ ಎಲ್ಲಾ ಬಂಧುಗಳೂ ಒಂದುಗೂಡಿ ಬಿಜೆಪಿಯ ಪರ ನಿಂತಿದ್ದಾರೆ ಎಂಬುದು ಬಾರಿಯ ಉಪ ಚುನಾವಣೆಯ ವಿಶೇಷ ಎಂದರು, ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿರುವವರಿಗೆ ಏಪ್ರಿಲ್ 9ರಂದು ನಡೆಯುವ ಮತದಾನ ಪ್ರಕ್ರಿಯೆಯ ಸಂದರ್ಭದಲ್ಲಿ ನೀವೆಲ್ಲರೂ ತಕ್ಕ ಉತ್ತರ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ವಿಧಾನಸಭೆಯ ವಿಪಕ್ಷ ನಾಯಕರಾದ ಕೆ.ಎಸ್.ಈಶ್ವರಪ್ಪನವರು ಸಹ ಮತಯಾಚನೆ ಮಾಡಿದರು ಸಂದರ್ಭದಲ್ಲಿ   ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕರಾದ .ಆರ್.ಕೃಷ್ಣಮೂರ್ತಿ, ಮಾಜಿ ಸಂಸದರಾದ ಕಾಗಲವಾಡಿ ಎಂ.ಶಿವಣ್ಣ, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ, ಮುಖಂಡರಾದ ಶಂಕರ್ ಬಿದರಿ, ಕಾ.ಪು.ಸಿದ್ಧಲಿಂಗಸ್ವಾಮಿ ಸೇರಿದಂತೆ ಹಲವು ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: