ಮೈಸೂರು

ನಾಳೆಯಿಂದ ಅರ್ಬನ್ ಹಾತ್ ನಲ್ಲಿ ಕೋವಿಡ್ 19 ಮಾರ್ಗಸೂಚಿ ಅನುಸರಿಸಿ ಕರಕುಶಲ ಮೇಳ ಆರಂಭ


ಮೈಸೂರು,ಸೆ.17:- ಕೋವಿಡ್- 19 ಲಾಕ್ಡೌನ್ ತೆರವಾದ ಬಳಿಕ ಮೈಸೂರು ನಗರದಲ್ಲಿ ಪ್ರಥಮ ಬಾರಿಗೆ ಸೆಪ್ಟೆಂಬರ್ 18ರಿಂದ 27ರವರೆಗೆ ಕರಕುಶಲ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕೋವಿಡ್ 19 ಮಾರ್ಗಸೂಚಿಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಕರಕುಶಲ ಇಲಾಖೆ ಸಹಯೋಗದಲ್ಲಿ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ಆಯೋಜಿಸಿರುವ ಈ ಮೇಳವು ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ ಎಂದು ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್.ಸುನಿಲ್ ಮಾಹಿತಿ ನೀಡಿದರು.

ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಈ ಬಾರಿಯ ಮೇಳದಲ್ಲಿ ವಸ್ತುಪ್ರದರ್ಶನಕ್ಕೆ ಬರುವ ಗ್ರಾಹಕರ, ಕುಶಲಕರ್ಮಿಗಳ ಆರೋಗ್ಯದ ಮೇಲೂ ಕಾಳಜಿ ವಹಿಸಲಾಗುತ್ತಿದೆ. ಕೋವಿಡ್ 19ಗೆ ಸಂಬಂಧಿಸಿ ಸರ್ಕಾರ, ಆಡಳಿತ ಮಂಡಳಿಯ ನಿಯಮಗಳಂತೆ ಮುಂಜಾಗೃತಾ ಕ್ರಮಗಳನ್ನು ವಹಿಸಲಾಗುವುದು. ಕೋವಿಡ್ ಪರೀಕ್ಷಾ ಪ್ರಮಾಣಪತ್ರ ಇರುವ ಕುಶಲಕರ್ಮಿಗಳು ಮಾತ್ರ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಮೇಳ ಪ್ರವೇಶಿಸುವ ಗ್ರಾಹಕರಿಗೂ ಅರ್ಬನ್ ಹಾತ್ನ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ಯಾನ್ಗೆ ಒಳಪಡಿಸಲಾಗುವುದು. ದೇಹದ ಉಷ್ಣಾಂಶ ನಿಗದಿಗಿಂತ ಹೆಚ್ಚು ಇದ್ದರೆ ಅಂಥವರಿಗೆ ಪ್ರವೇಶ ಅವಕಾಶ ನೀಡುವುದಿಲ್ಲ. ಮೇಳದ ಪ್ರಮುಖ ಸ್ಥಳಗಳಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ಯಂತ್ರಗಳನ್ನು ಅಳವಡಿಸಲಾಗುವುದು. ಅರ್ಬನ್ ಹಾತ್ ವಿಶಾಲವಾದ ಪ್ರದೇಶದಲ್ಲಿ ಇರುವುದರಿಂದ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲು ಹೆಚ್ಚಿನ ಅನುಕೂಲ ಇದೆ ಎಂದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅವರು ಸೆ.18ರಂದು ಸಂಜೆ 4 ಗಂಟೆಗೆ ಮೇಳವನ್ನು ಉದ್ಘಾಟಿಸುವರು. ಜೆಎಸ್ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ, ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕಾ ವಿಭಾಗದ ನಿರ್ದೇಶಕ ಎಸ್.ಶಿವಶಂಕರಪ್ಪ, ಮೈಸೂರು ಕರಕುಶಲ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್.ಸುನಿಲ್ ಕುಮಾರ್ ಭಾಗವಹಿಸುವರು. ಕರ್ನಾಟಕವೂ ಸೇರಿದಂತೆ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ ಮೊದಲಾದ ರಾಜ್ಯಗಳ ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಮಧುಬನಿ ಚಿತ್ರಕಲೆ, ರತ್ನಗಂಬಳಿ, ಸೆಣಬಿನ ಉತ್ಪನ್ನಗಳು, ವೈಸೂರಿನ ವುಡ್ ಇನ್ಲೇ, ಚನ್ನಪಟ್ಟಣದ ಬೊಂಬೆಗಳು, ಹೈದರಾಬಾದಿನ ಮುತ್ತಿನ ಆಭರಣಗಳು, ಗೊಂಡ್ ವರ್ಣ ಚಿತ್ರಗಳು, ಬಿದಿರಿನ ಪೀಠೋಪಕರಣಗಳು, ಕುಸುರಿ ಕಲಾಕೃತಿಗಳ ಮಾರಾಟ, ಪ್ರದರ್ಶನ ಇರಲಿದೆ. ನ್ಯಾಯಯುತ ಬೆಲೆಯಲ್ಲಿ ಕರಕುಶಲ ವಸ್ತುಗಳು ಸಿಗಲಿವೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಸ್ಎಸ್ ಮೈಸೂರು ಅರ್ಬನ್ ಹಾತ್ನ ಯೋಜನಾಧಿಕಾರಿ ಶಿವನಂಜಸ್ವಾಮಿ, ಸಂಯೋಜನಾಧಿಕಾರಿ ರಾಕೇಶ್ ರೈ ಎ. ಇದ್ದರು.

Leave a Reply

comments

Related Articles

error: