ಪ್ರಮುಖ ಸುದ್ದಿಮೈಸೂರು

ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಮಾತ್ರ ಅಲ್ಲವಾ ಸಾಲಮನ್ನಾ ಮಾಡೋದು ಸಿದ್ದರಾಮಯ್ಯ ಪ್ರಶ್ನೆ

ನಂಜನಗೂಡು ಉಪಚುನಾವಣೆ ಹಿನ್ನಲೆಯಲ್ಲಿ ಹುಲ್ಲಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು ಯಾರನ್ನೂ ವೈಯಕ್ತಿಕವಾಗಿ  ಟೀಕಿಸುವ ಅಗತ್ಯವಿಲ್ಲ. ಜನರು ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದಾರೆ. ಕಳಲೆ ಕೇಶವಮೂರ್ತಿ, ಗೀತಾ ಮಹದೇವ ಪ್ರಸಾದ್ ನೂರಕ್ಕೆ ನೂರರಷ್ಟೂ ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳಲ್ಲಿ ಅತ್ಯಂತ ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಬಹಳ ಜನ ಹಗಲು ಕನಸು ಕಾಣುತ್ತಿದ್ದಾರೆ. ಅವಧಿಗೂ ಮುನ್ನ ಚುನಾವಣೆ ಬರುತ್ತದೆ ಅಂತ ನಾನು ಇನ್ನೂ ಬಜೆಟ್ ಮಂಡಿಸುತ್ತೇನೆ. ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜ ನಗರಕ್ಕೆ ಹೋಗದಿದ್ದವರು ಏನು ಭವಿಷ್ಯ ನುಡಿತ್ತಾರೆ ಎಂದು ಬಿಎಸ್ ಯಡಿಯೂರಪ್ಪನವರಿಗೆ ಸಿಎಂ ಟಾಂಗ್ ನೀಡಿದರು. ಸಿದ್ದರಾಮಯ್ಯ ಬಜೆಟ್ ಮಂಡಿಸಲ್ಲ ಅಂತ ಶಾಸ್ತ್ರದ ಮಂದಿ ಹೇಳಿದರು. ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಕಾರ್ ಬದಲಾಯಿಸಿದರು ಅಂತ ಹೇಳಿದರು. ನನ್ನ ಕಾರು ಹಳೆಯದಾಗಿತ್ತು ಅದಕ್ಕೆ ಬದಲಾಯಿಸಿದೆ ಎಂದರು.

ಮುಂದಿನ ಫೆಭ್ರವರಿಯಲ್ಲಿ ಮತ್ತೆ ಬಜೆಟ್ ಮಂಡನೆ ಮಾಡುತ್ತೇನೆ. ನಾನು ರಾಜ್ಯದಲ್ಲಿ ಮಂಡಿಸಿದ್ದ ಬಜೆಟ್ ತೆಲಂಗಾಣದಲ್ಲಿ ಚರ್ಚೆಯಾಗಿದೆ.ಈ ನಾಡು ಸಾಮಾಜಿಕ ನ್ಯಾಯ ಬಿತ್ತಿದ ನಾಡು,ಉತ್ತರ ಪ್ರದೇಶ ಅಲ್ಲ. ಉತ್ತರ ಪ್ರದೇಶದ ಚುನಾವಣೆ ಕರ್ನಾಟಕದ ಮೇಲೆ ಪ್ರಭಾವ ಬೀರಲ್ಲ. ಇದು ಶರಣರ ನಾಡು, ಕನಕದಾಸರ ನಾಡು, ಶಿಶುನಾಳ ಶರೀಫರ ನಾಡು. ನಾನು ಬಸವಣ್ಣ ಅವರ ಜನ್ಮ ದಿನಾಚರಣೆಯಲ್ಲಿ ಅಧಿಕಾರ ಸ್ವೀಕರಿಸಿದ್ದೆ. ಬಡವರಿಗೆ 3 ರೂ. ಗೆ ಅಕ್ಕಿ ಕೊಡಬೇಕು ಅಂತ ತೀರ್ಮಾನ ಮಾಡಿದ್ದು ಕೇಂದ್ರದ ಮನಮೊಹನ್ ಸಿಂಗ್ ಸರ್ಕಾರ,ಮೋದಿ ಸರ್ಕಾರ ಅಲ್ಲ ಎಂದು ತಿಳಿಸಿದರು.

ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇನೆ ಅಂತ ಯಡಿಯೂರಪ್ಪ ಹೇಳಿದರು. ನಾನು ಮೋದಿಯವರಿಗೆ ಪತ್ರ ಬರೆದಿದ್ದೇನೆ, ನಿಯೋಗ ಕರೆದುಕೊಂಡು ಹೋಗಿದ್ದೆ, ಅರ್ಧ ಸಾಲ ಮನ್ನಾ ಮಾಡಿ ಅಂತ ಬೇಡಿಕೊಂಡೆ, ಆದರೆ ಮೋದಿ ಬಳಿ ಯಡಿಯೂರಪ್ಪ, ಶೋಭಾ, ಜಗದೀಶ್ ಶೆಟ್ಟರ್, ಅನಂತಕುಮಾರ್,ಈಶ್ವರಪ್ಪ ಬಾಯಿ ಬಿಡಲಿಲ್ಲ. ಆದರೆ ಇಲ್ಲಿ ಬಂದು ಬಾಯಿ ಬಡಿಯುತ್ತಾರೆ. ಯಡಿಯೂರಪ್ಪ ಬುರುಡೆ ದಾಸ. ಅಧಿಕಾರಕ್ಕೆ ಬಂದರೆ ಸಾಲಾ ಮನ್ನಾ ಮಾಡುತ್ತೇವೆ ಅನ್ನುತ್ತಾರೆ. ಅಧಿಕಾರಕ್ಕೆ ಬಂದರೆ  ತಾನೆ ನೀವು ಸಾಲ ಮನ್ನಾ ಮಾಡೋದು .ಸಾಲಾ  ಮನ್ನಾ ಮಾಡೋದಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದರು.

ಈಶ್ವರಪ್ಪ  ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಪಕ್ಷ ಬಿಟ್ಟು ನಾನು ಜ್ಯಾತ್ಯಾತೀತ ಪಕ್ಷದಲ್ಲಿಯೇ ಇದ್ದೇನೆ.ತಲಾಕ್ ರಾಜಕಾರಣಿ ಅಲ್ಲ.ಪಕ್ಷ ಬಿಟ್ಟು ಪಕ್ಷಕ್ಕೆ ಬನ್ನಿ ಅಂತಾರಲ್ಲ ಅವರಿಗೆ ಏನು ಹೇಳಬೇಕು.ಈಶ್ವರಪ್ಪಗೆ ಮನಸ್ಸಿದ್ದರೆ ಅಲ್ವ ಕ್ಷಮೆ ಕೇಳೋದು ಎಂದು ವ್ಯಂಗ್ಯವಾಡಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: