ಮೈಸೂರು

ಬಡ್ತಿ ಮೀಸಲಾತಿ ಕುರಿತು ನ್ಯಾಯಾಲಯ ನೀಡಿರುವ ತೀರ್ಪು ದಲಿತರ ಮರಣ ಶಾಸನವಾಗಿದೆ : ಜ್ಞಾನ ಪ್ರಕಾಶ ಸ್ವಾಮೀಜಿ

ಬಡ್ತಿ ಮೀಸಲಾತಿ ವಿಚಾರವಾಗಿ ಸವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ದಲಿತರಿಗೆ ಮರಣ ಶಾಸನವಾಗಿದ್ದು,  ಮೀಸಲಾತಿಯನ್ನು ಸಂಪೂರ್ಣ ರದ್ದುಪಡಿಸುವ ಮೊದಲ ಹೆಜ್ಜೆಯಾಗಿದೆ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ್ತಿ ಮೀಸಲಾತಿ ರದ್ದು ಪಡಿಸಿ ತೀರ್ಪು ಬಂದು 2 ತಿಂಗಳುಗಳಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ಬಗ್ಗೆ ಚಕಾರವೆತ್ತದೆ ಏಕೆ ಜಾಣ ಮೌನ ವಹಿಸಿದೆ? ತೀರ್ಪಿನ ವಿಚಾರವಾಗಿ ಮೇಲ್ಮನವಿ ಅರ್ಜಿಯನ್ನು ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದ ಮೀಸಲಾತಿಯೂ ಸಹ ರದ್ದುಗೊಳ್ಳುತ್ತದೆ ಎಂದರು.

ಸರ್ವೋಚ್ಛ ನ್ಯಾಯಾಲಯ ಬಡ್ತಿ ಮೀಸಲಾತಿ ರದ್ದುಗೊಳಿಸಲು ದಲಿತರು ಮೈಗಳ್ಳರು, ಅವರು ಮತ್ತೊಬ್ಬರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಮೀಸಲಾತಿಯಿಂದ ಜಾತೀಯತೆ ಹೆಚ್ಚಾಗುತ್ತದೆ ಎಂಬ ಕಾರಣಗಳನ್ನು ನೀಡಿದ್ದಾರೆ. ದಲಿತರು ಮೈಗಳ್ಳರು, ಅವರು ಮತ್ತೊಬ್ಬರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಯಾವ ಆಯೋಗ ನಿಮಗೆ ವರದಿ ನೀಡಿದೆ? ಎಂದು ಪ್ರಶ್ನಿಸಿದ ಅವರು, ಮೀಸಲಾತಿ ಬರುವ ಮುನ್ನ ಸಮಾಜದಲ್ಲಿ ಜಾತೀಯತೆ ಇರಲಿಲ್ಲವೇ? ಮೀಸಲಾತಿ ಕಲ್ಪನೆ ಸಾಮಾಜಿಕ ನ್ಯಾಯವಾಗಿದೆ. ಮೀಸಲಾತಿ ಬೇಡವೆಂದರೆ ಜಾತಿ ನಾಶ ಮಾಡಿ. ಕ್ಯಾಶ್ ಲೆಸ್ ಭಾರತ ಮಾಡುವವರು ಕ್ಯಾಸ್ಟ್ ಲೆಸ್ ಭಾರತ ಮಾಡಿ ಎಂದು ತಿರುಗೇಟು ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರಿಗೆ ಮರಣ ಶಾಸನವಾಗಿರುವ ಸರ್ವೋಚ್ಛ  ನ್ಯಾಯಾಲಯದ ತೀರ್ಪಿನ ವಿಚಾರವಾಗಿ ಚರ್ಚಿಸಿ ಮೀಸಲಾತಿಯನ್ನು ಉಳಿಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಚಿಂತಿಸಲು ಚುನಾವಣೆ ಮುಗಿದ ನಂತರ ಬೆಂಗಳೂರಿನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಹದೇವಸ್ವಾಮೀಜಿ, ಕಲ್ಯಾಣಶ್ರೀ ಭಂತೇಜಿ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ  ಹಾಜರಿದ್ದರು.  (ಎಲ್.ಜಿ.ಎಸ್.ಎಚ್)

Leave a Reply

comments

Related Articles

error: