ದೇಶಪ್ರಮುಖ ಸುದ್ದಿ

ಹರ್‌ಸಿಮ್ರತ್‌ ಕೌರ್ ಬಾದಲ್ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ,ಸೆ.18- ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್ ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಅಂಗೀಕರಿಸಿದ್ದಾರೆ.

ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಹರ್‌ಸಿಮ್ರತ್‌ ಕೌರ್ ಬಾದಲ್ ನಿನ್ನೆ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಇಂದು ರಾಷ್ಟ್ರಪತಿಗಳು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಪ್ರಧಾನಮಂತ್ರಿಯವರ ಸಲಹೆಯಂತೆ ರಾಷ್ಟ್ರಪತಿಗಳು, ಸಂವಿಧಾನದ 75ನೇ ಪರಿಚ್ಛೇದ 75 ರ (2)ನೇ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಸಂಪುಟ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹೆಚ್ಚುವರಿಯಾಗಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಉಸ್ತುವಾರಿಯನ್ನು ವಹಿಸಬೇಕೆಂದು ರಾಷ್ಟ್ರಪತಿಗಳು ನಿರ್ದೇಶಿಸಿದ್ದಾರೆ ಎಂದೂ ಅದು ಹೇಳಿದೆ.

ಪಕ್ಷದ ವಕ್ತಾರ ಹರ್‌ಚರಣ್‌ ಬೈನ್ಸ್‌ ಅವರು ಈ ವಿಚಾರವನ್ನೂ ಅಧಿಕೃತವಾಗಿ ಘೋಷಣೆ ಮಾಡಿ, ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರಬಂದಿದ್ದಾರೆ ಎಂದು ತಿಳಿಸಿದ್ದರು.

ಕೇಂದ್ರದ ರೈತ ವಿರೋಧಿ ಕ್ರಮವನ್ನು ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್‌ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹರ್‌ಸಿಮ್ರತ್ ಅವರ ಪತಿ ಮತ್ತು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಹರ್‌ಸಿಮ್ರತ್‌ ಕೌರ್‌ ರಾಜೀನಾಮೆ ಸಲ್ಲಿಸಿದ್ದರು. ಮಸೂದೆಗಳು ಸುಗ್ರೀವಾಜ್ಞೆಗಳನ್ನು ಬದಲಿಸುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದ್ದರು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: