ಮೈಸೂರು

‘ಹಿಂದಿ ದೇಶದ ರಾಷ್ಟ್ರೀಯ ಭಾಷೆಯಲ್ಲ’ ಬಲವಂತದ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಿ : ಜಿ.ಎಂ.ಗಾಡ್ಕರ್ ಒತ್ತಾಯ

ಮೈಸೂರು,ಸೆ.18:- ‘ಹಿಂದಿ ದೇಶದ ರಾಷ್ಟ್ರೀಯ ಭಾಷೆಯಲ್ಲ’ ಬಲವಂತದ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಿ ಎಂದು ಕೇಂದ್ರ ಸರ್ಕಾರವನ್ನು ಸಮಾಜವಾದಿ ಜನತಾ ಪಕ್ಷ ಒತ್ತಾಯಿಸಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಜಿ.ಎಂ.ಗಾಡ್ಕರ್ ಮಾತನಾಡಿ ಭಾರತದ ಸಂವಿಧಾನವು ದೇಶದ 22ಭಾಷೆಗಳಿಗೆ ಸಮಾನ ಸ್ಥಾನಮಾನವನ್ನು ನೀಡಿದ್ದು ಆ 22ಭಾಷೆಗಳೂ ದೇಶದ ಅಧಿಕೃತ ಆಡಳಿತ ಭಾಷೆಗಳು ಎಂದು ಸಂವಿಧಾನದ ಆರ್ಟಿಕಲ್ 343 ಮತ್ತು 345ರಲ್ಲಿ ಘೋಷಿಸಲಾಗಿದೆ. ಇದೇ ಆರ್ಟಿಕಲ್ ಪ್ರಕಾರ ಹಿಂದಿ ಕೂಡ ಒಂದು ಅಧೀಕೃತ ಆಡಳಿತ ಭಾಷೆಯೇ ಹೊರತು ರಾಷ್ಟ್ರ ಭಾಷೆಯೆಂದು ಘೋಷಣೆಯಾಗಿಲ್ಲ ಎಂದರು.
ಸಂಘಪರಿವಾರ ಮತ್ತು ಬಿಜೆಪಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ದೇಶದ ವಿವಿಧ ರಾಜ್ಯಗಳ ಪ್ರಾದೇಶಿಕ ಅಧೀಕೃತ ಆಡಳಿತ ಭಾಷೆಗಳ ವಿರುದ್ಧ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರಲು ಹುನ್ನಾರ ನಡೆಯುತ್ತಿದ್ದು ಸಮಾಜವಾದಿ ಜನತಾ ಪಕ್ಷ ಖಂಡಿಸುತ್ತದೆ ಎಂದರು.
ಪ್ರಧಾನಿ ಮೋದಿಯವರ ನೋಟು ಅಮಾನ್ಯೀಕರಣ, ಜಿಎಸ್ ಟಿ, ಬ್ಯಾಂಕುಗಳ ಎನ್ ಪಿಎ ಮತ್ತು ಪಿಎಂಸಿಗಳು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿ ಖಾಸಗೀಕರಣಗೊಳಿಸುವುದು ಆ ಮೂಲಕ ಉದ್ಯೋಗಗಳನ್ನು ಕಡಿತಗೊಳಿಸುವುದು, ಗಲಭೆಗಳನ್ನು ಹುಟ್ಟು ಹಾಕಿ ಕೋಟ್ಯಂತರ ರೂ.ಗಳ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವುದು, ಸಣ್ಣ ಸಣ್ಣ ಉದ್ಯಮಗಳ ಬಾಗಿಲು ಮುಚ್ಚಿಸುವುದು ಬ್ಯಾಂಕುಗಳನ್ನು ಮುಳುಗಿಸುವುದು ಹಾಗೂ ವೋಡಾಫೋನ್ ಸೇರಿದಂತೆ ಅನೇಕ ಕಂಪನಿಗಳನ್ನು ಮುಳುಗುವಂತೆ ಅನಿವಾರ್ಯ ವಾತಾವರಣ ಸೃಷ್ಟಿ ಸುವುದು ಹಾಗೂ ದೇಶದ ಪ್ರಜಾಪ್ರಭುತ್ವ ಸಂವಿಧಾನವನ್ನು ದುರ್ಬಲಗೊಳಿಸುವುದು ಹೀಗೆ ದೇಶದ ಉದ್ಯೋಗ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ನಾಶ ಮಾಡುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಆರೋಪಿಸಿದರು.
ಆದ್ದರಿಂದ ಕೋಮುವಾದಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಸಮಾಜವಾದಿ ಜನತಾಪಕ್ಷವು ತೀರ್ವವಾಗಿ ಖಂಡಿಸುತ್ತದೆ. ದೇಶದ 22ಪ್ರಾದೇಶಿಕ ಅಧೀಕೃತ ಆಡಳಿತ ಭಾಷೆಗಳ ವಿರುದ್ಧ ಹಿಂದಿ ಹೇರಿಕೆಯ ನಿರ್ಧಾರವನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: