ಮೈಸೂರು

ವಚನ ನೀಡಿ ಮಾತು ತಪ್ಪಿದ ಸರ್ಕಾರದ ವಿರುದ್ಧ ಸೆ.21ರಿಂದ 10ದಿನಗಳ ಕಾಲ ಆಶಾಕಾರ್ಯಕರ್ತೆಯರ ಹೋರಾಟ ಅನಿವಾರ್ಯ : ಸಂಧ್ಯಾ ಪಿ.ಎಸ್

ಮೈಸೂರು,ಸೆ.18:- ಕೊರೋನಾ ವಾರಿಯರ್ಸ್ ಎಂದೇ ಹೆಸರಾದ ರಾಜ್ಯದ 42,000 ಆಶಾ ಕಾರ್ಯಕರ್ತೆಯರು ಎರಡು ತಿಂಗಳ ಹಿಂದೆ 20ದಿನಗಳ ನಿರಂತರ ಹೋರಾಟ ಮಾಡಿದ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿ ಇದೀಗ ಎರಡು ತಿಂಗಳು ತಾಳ್ಮೆ ಕಾಯ್ದುಕೊಂಡು ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರತರಾದ ಆಶಾಗಳಿಗೆ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರದ ವಿರುದ್ಧ ಮತ್ತೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಹೋರಾಟಕ್ಕಿಳಿಯಲು ನಿರ್ಧರಿಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ರಾಜ್ಯ ಸಮಿತಿ ಸದಸ್ಯೆ ಸಂಧ್ಯಾ ಪಿ.ಎಸ್.ಮಾತನಾಡಿ ರಾಜ್ಯದಾದ್ಯಂತ ಎಲ್ಲಾ ಶಾಸಕರು, ಸಂಸದರು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಆಶಾ ಪರ ಧ್ವನಿಯೆತ್ತುವಂತೆ ಆಗ್ರಹಿಸಲಾಗುವುದು. ಸೆ.21ರಿಂದ 10ದಿನಗಳ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ 4000 ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ, ಕೇಂದ್ರ ಸರ್ಕಾರದಿಂದ ಚಟುವಟಿಕೆಗಳನ್ನು ಆಧರಿಸಿ ನೀಡುವ ಪ್ರೋತ್ಸಾಹಧನ ಸರಾಸರಿ 6000ರೂ.ಎರಡೂ ಸೇರಿ ಸುಮಾರು 10,000ಪಡೆಯುವಂತೆ ಯೋಜನೆ ಇದೆ. ಇದಕ್ಕೆ ಸರ್ಕಾರದ ಅನುದಾನವೂ ಇದೆ. ಆದರೆ ಅದು ಇದುವರೆಗೂ ಸರಿಯಾಗಿ ತಲುಪುತ್ತಿಲ್ಲ. ಅಂತೆಯೇ ಇದಕ್ಕೆ ಇನ್ನೊಂದಿಷ್ಟು ಹಣವನ್ನು ಸೇರಿಸಿ 12,000ರೂ. ನಿಗದಿಯಾಗಿ ಕೊಡುವುದು ಸರ್ಕಾರಕ್ಕೆ ಕಷ್ಟವಲ್ಲ ಎಂದರು.
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇಡೀ ರಾಜ್ಯದ ಜನತೆ ಸ್ಪಂದಿಸಿದೆ. ಆ.29ರಂದು ಸಿಎಂ ಕೂಡ ಸರ್ಕಾರ ಆಶಾ ಜೊತೆಗಿದೆ. ಶೀಘ್ರ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಬೆಂಗಳೂರಿನಲ್ಲಿ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವ ಶ್ರೀರಾಮುಲು ಅವರು 2-3ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ವಚನವಿತ್ತರು. ನಂತರ ಆಶಾ ಕಾರ್ಯಕರ್ತೆಯರು ತಮ್ಮ 20ದಿನಗಳ ಹೋರಾಟವನ್ನು ತಕ್ಷಣ ಸ್ಥಗಿತಗೊಳಿಸಿದರು. ಆದರೆ ಮುಷ್ಕರ ಸ್ಥಗಿತಗೊಳಿಸಿ 47ದಿನ ಕಳೆದರೂ ಸರ್ಕಾರದ ಕಡೆಯಿಂದ ಯಾವ ಅಧಿಕೃತ ಘೋಷಣೆಯೂ ಬಂದಿಲ್ಲ. ಆದ್ದರಿಂದಲೇ ಈಗ ಅನಿವಾರ್ಯವಾಗಿ ಆಶಾ ಕಾರ್ಯಕರ್ತೆಯರು ಮತ್ತೊಮ್ಮೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ. ಮಾತಿನಂತೆ ನಡೆಯದ ಸರ್ಕಾರದ ಅಲಕ್ಷ ಧೋರಣೆ ವಿರುದ್ಧ ಬಲಿಷ್ಠ ಹೋರಾಟವನ್ನು ಕೈಗೊಳ್ಳಬೇಕಾಗಿ ಬಂದಿದೆ ಎಂದರು.
ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ 12000ರೂ, ಕೂಡಲೇ ಘೋಷಿಸಬೇಕು. ಬಾಕಿ ಇರುವ ಪ್ರೋತ್ಸಾಹಧನ ಆಶಾಗೆ ಒದಗಿಸಲು ಕ್ರಮಕೈಗೊಳ್ಳಬೇಕು. ಈಗಾಗಲೇ ಘೋಷಿಸಿದ 3000ರೂ.ಕೋವಿಡ್ ಪ್ರೋತ್ಸಾಹ ಧನವನ್ನು ಇನ್ನೂ ತಲುಪದಿರುವ ಆಶಾಗಳಿಗೆ ಪಾವತಿಯಾಗುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಕರ ಮೇಟಿ, ನಗರ ಕಾರ್ಯದರ್ಶಿ ಸುನೀತ ಮತ್ಚತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: