ಕರ್ನಾಟಕಪ್ರಮುಖ ಸುದ್ದಿ

ಕೊರೊನಾ ನಿಯಮಾವಳಿಯಂತೆ ರಾಯಚೂರು ರುದ್ರಭೂಮಿಯಲ್ಲಿ ಅಶೋಕ್ ಗಸ್ತಿ ಅಂತ್ಯಸಂಸ್ಕಾರ

ರಾಯಚೂರು,ಸೆ.18-ಕೊರೊನಾ ಸೋಂಕು ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ಅಂತ್ಯಸಂಸ್ಕಾರ ಕೊರೊನಾ ನಿಯಮದಂತೆ ಇಂದು ರಾಯಚೂರಿನಲ್ಲಿ ನಡೆಯಲಿದೆ.

ರಾಯಚೂರು ನಗರದ ಪೋತಗಲ್ ರಸ್ತೆಯಲ್ಲಿ ಕೊರೊನಾದಿಂದ ಮೃತರಿಗಾಗಿ ಮೀಸಲಿರಿಸಿರುವ ರುದ್ರಭೂಮಿಯಲ್ಲಿ ಗಸ್ತಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಗಸ್ತಿ ಅವರು ಕೊರೊನಾದಿಂದಾಗಿ ಮೃತಪಟ್ಟ ಹಿನ್ನೆಲೆ ಕೊರೊನಾ ನಿಯಮದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಗಸ್ತಿ ಅವರ ಪಾರ್ಥಿವ ಶರೀರ ರಾಯಚೂರಿನ ಅವರ ನಿವಾಸಕ್ಕೆ ಆಗಮಿಸಿದೆ. ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಶವವನ್ನು ಅಂಬ್ಯುಲೆನ್ಸ್‌ ಮೂಲಕವೇ ಪೋತಗಲ್‌ನ ಸ್ಮಶಾನಕ್ಕೆ ರವಾನಿಸಲಾಗುವುದು.

ಬೆಂಬಲಿಗರಿಗೆ ದೂರದಿಂದಲೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಇನ್ನು ಅಂತ್ಯ ಸಂಸ್ಕಾರದ ವೇಳೆ ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ.

ಇತ್ತೀಚಿಗಷ್ಟೇ 55 ವರ್ಷದ ಅಶೋಕ್‌ ಗಸ್ತಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸೆ.2ರಂದು ಗಸ್ತಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಾವನಪ್ಪಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: