ಮೈಸೂರು

ಪರವಾನಿಗೆ ಪಡೆಯದ ಮೂರು ಅಂಗಡಿಗಳನ್ನು ಬಂದ್ ಮಾಡಿಸಿದ ನಗರಪಾಲಿಕೆ ಅಧಿಕಾರಿಗಳು

ಮೈಸೂರು,ಸೆ.18-ನಗರಪಾಲಿಕೆ ವಲಯ ಕಚೇರಿ 3ರ ವ್ಯಾಪ್ತಿಯಲ್ಲಿ ಉದ್ದಿಮೆ ರಹದಾರಿ ಪಡೆದುಕೊಳ್ಳದೆ ಅಂಗಡಿಗಳನ್ನು ತೆರೆದು ಉದ್ದಿಮೆ ನಡೆಸುತ್ತಿದ್ದ ಮೂರು ಅಂಗಡಿಗಳನ್ನು ಇಂದು ನಗರಪಾಲಿಕೆಯ ಅಧಿಕಾರಿಗಳು ಮುಚ್ಚಿಸಿದರು.

ನಗರಪಾಲಿಕೆಯಿಂದ ಕಳೆದ ಒಂದು ವಾರದಿಂದ ಉದ್ದಿಮೆ ರಹದಾರಿ ಆಂದೋಲನ ನಡೆಸುತ್ತಿದ್ದು, ಅದರಂತೆ ಇಂದು ವಾರ್ಡ್ ನಂ 46ರ ವ್ಯಾಪ್ತಿಯ ದಟ್ಟಗಳ್ಳಿಯಲ್ಲಿ ಎಸಿ ಸತ್ಯಮೂರ್ತಿ ಅವರ ನೇತೃತ್ವದದಲ್ಲಿ ನಗರಪಾಲಿಕೆ ಅಧಿಕಾರಿಗಳು, ಅಭಯ ತಂಡ, ಆರೋಗ್ಯ ಇಲಾಖೆ ತಂಡದೊಂದಿಗೆ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಉದ್ದಿಮೆ ರಹದಾರಿ ಪಡೆಯದ ಅಪೋಲೋ ಫಾರ್ಮಸಿ, ಫ್ಲೇವರ್ಸ್, ಸ್ಟೀಲ್ ಅಂಗಡಿಯನ್ನು ಮುಚ್ಚಿಸಲಾಯಿತು. ಇವರು ಸುಮಾರು 35-45 ಸಾವಿರ ಕಟ್ಟಬೇಕಿದೆ. ಉದ್ದಿಮೆ ರಹದಾರಿ ಪಡೆಯದವರು ಸ್ಥಳದಲ್ಲೇ ಹಣ ಪಾವತಿಸಿದರೆ ಅವರಿಗೆ ರಶೀದಿ ನೀಡಿ ಉದ್ದಿಮೆ ನಡೆಸಲು ಅವಕಾಶ ಮಾಡಿಕೊಡಲಾಯಿತು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸಿ ಸತ್ಯಮೂರ್ತಿ ಅವರು, ಕೊರೊನಾ ಸಂಕಷ್ಟದಿಂದ ನಗರಪಾಲಿಕೆಯ ಆರ್ಥಿಕತೆ ಹೊಡೆತ ಬಿದ್ದಿದೆ. ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರ ಸೂಚನೆಯಂತೆ ಕಳೆದ ಒಂದು ವಾರದಿಂದ ಉದ್ದಿಮೆ ರಹದಾರಿ ಆಂದೋಲನ ನಡೆಸುತ್ತಿದ್ದೇವೆ. ಕೆಲವರು ಸುಮಾರು 3-4 ವರ್ಷಗಳಿಂದ ಉದ್ದಿಮೆ ರಹದಾರಿ ತೆಗೆದುಕೊಳ್ಳದೆ ಅಂಗಡಿಗಳನ್ನು ತೆರೆದು ಉದ್ದಿಮೆ ನಡೆಸುತ್ತಿದ್ದಾರೆ. ಇಂತಹವರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಿದ್ದಲ್ಲದೆ, ಕಳೆದ ತಿಂಗಳು ನೋಟಿಸ್ ನೀಡಿ ಹಣ ಪಾವತಿಸುವಂತೆ ತಿಳಿಸಲಾಗಿತ್ತು. ಆದರೂ ಹಣ ಪಾವತಿಸದೆ ಉದ್ದಿಮೆ ನಡೆಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಹಣ ಪಾವತಿಸಿದರೆ ಉದ್ದಿಮೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಹಣ ಪಾವತಿಸದಿರುವವರ ಅಂಗಡಿಗಳನ್ನು ಮುಚ್ಚಲಾಗುತ್ತಿದೆ ಎಂದರು.

ಮುಂಚೆ ದಿನಕ್ಕೆ 5ರಿಂದ 10 ಸಾವಿರ ರೂ. ಕಲೆಕ್ಷನ್ ಆಗುತ್ತಿರಲಿಲ್ಲ. ಈಗ ಕೆಲಕ್ಷನ್ ಆಗುತ್ತಿದೆ. ಬುಧವಾರ (ಸೆ.16) ರಂದು 1.87 ಲಕ್ಷ ರೂ. ಕಲೆಕ್ಷನ್ ಆಗಿದೆ. ಇಂದು ಮಧ್ಯಾಹ್ನದವರೆಗೆ 1 ಲಕ್ಷ ರೂ. ಕಲೆಕ್ಷನ್ ಆಗಿದೆ. ಸಂಜೆವರೆಗೆ ಸುಮಾರು 2 ರಿಂದ 2.15 ಲಕ್ಷ ಆಗಬಹುದು ಎಂದು ಮಾಹಿತಿ ನೀಡಿದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: