ಮೈಸೂರು

ಬಿಜೆಪಿ ದಲಿತರಿಗೆ ನೀಡಿರುವ ಸ್ಥಾನಮಾನಗಳ ಬಗ್ಗೆ ಸ್ಪಷ್ಟನೆ ನೀಡಲಿ : ಸಿ.ಎಂ.ಧನಂಜಯ್

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ದಲಿತ ವಿರೋಧಿ ಎಂದು ಆರೋಪಿಸುತ್ತಿರುವ ಬಿಜೆಪಿ ಕಾಂಗ್ರೆಸ್‍ಗೆ ಹೋಲಿಸಿದಂತೆ ದಲಿತರಿಗೆ ಯಾವ ಸ್ಥಾನಮಾನ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಸಿ.ಎಂ. ಧನಂಜಯ್ ಒತ್ತಾಯಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರಿಗೆ ಆರು ಪ್ರಮುಖ ಸಚಿವ ಸ್ಥಾನ ನೀಡಲಾಗಿದೆ. ಆದರೆ ಕೇಂದ್ರದಲ್ಲಿ ಎಷ್ಟು ಸ್ಥಾನ ನೀಡಲಾಗಿದೆ, ಒಬ್ಬಿಬ್ಬರಿಗೆ ನೀಡಿದ್ದರೂ ಅವು ಪರಿಗಣನೀಯವೇ?  ಜೊತೆಗೆ ಉತ್ತರ ಪ್ರದೇಶದಲ್ಲಿ ಈಗ ದಲಿತರಿಗೆ ನೀಡಿರುವ ಸ್ಥಾನಮಾನವೇನು? ಎಂಬುದನ್ನು ಗಮನಿಸಿದಾಗ ಸ್ವತಃ ಬಿಜೆಪಿಯೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಈ ಅಂಶಗಳನ್ನು ಗಮನಿಸಿ ಮತದಾರರು ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಳೆದ ಐದು ದಶಕದಲ್ಲಿ ಈ ರೀತಿಯ ಕೆಟ್ಟ ಸರ್ಕಾರ ಕಂಡಿದ್ದಿಲ್ಲ ಎಂದಿದ್ದಾರೆ. ಇದು ಪೂರ್ವಾಗ್ರಹ ಪೀಡಿತ ಹೇಳಿಕೆಯಾಗಿದೆ. ಇನ್ನಾದರೂ ಅವರು ಅಪಪ್ರಚಾರ ನಿಲ್ಲಿಸಲಿ. ಈ ಭಾಗದ ವರುಣ ನಾಲೆ ಅಭಿವೃದ್ಧಿಯ ಮೂಲ ರೂವಾರಿಯೇ ಸಿದ್ದರಾಮಯ್ಯ ನವರಾಗಿದ್ದು, ಇದೇ ಎಸ್.ಎಂ. ಕೃಷ್ಣ ಅದನ್ನು ವಿರೋಧಿಸಿದ್ದರೆಂಬುದನ್ನು ಈ ಭಾಗದ ಜನರು ಮರೆಯುವುದಿಲ್ಲವೆಂದು ತಿಳಿಸಿದರು.

ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ಹಾಗೂ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ನಂಜನಗೂಡು ವಿಭಾಗದ ವತಿಯಿಂದ ಏ.5 ರಂದು ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸಲಾಗುವುದು ಎಂದು  ತಿಳಿಸಿದರು.

ಅಂದು ಬೆಳಿಗ್ಗೆ 10 ಗಂಟೆಗೆ ನಂಜನಗೂಡಿನ ವಿದ್ಯಾಗಣಪತಿ ದೇವಸ್ಥಾನದಿಂದ ನಂಜನಗೂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಲಾಗುವುದು. ಇದಕ್ಕೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಚಾಲನೆ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸುರೇಶ್, ರಾಚಪ್ಪ, ನಾಗರಾಜಯ್ಯ, ಡಿ.ಆನಂದರಾಜು, ನಾಗರಾಜಯ್ಯ, ಶ್ರೀನಿವಾಸ ಬಾಬು, ಮೂಡಳ್ಳಿ ಶೇಖರ್  ಹಾಜರಿದ್ದರು. (ಎಲ್.ಜಿ-ಎಸ್.ಎಚ್)

 

 

 

 

 

Leave a Reply

comments

Related Articles

error: