ಕರ್ನಾಟಕಪ್ರಮುಖ ಸುದ್ದಿ

ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ನಿಧನಕ್ಕೆ ಸಿಎಂ ಬಿಎಸ್ವೈ, ಡಿಸಿಎಂ ಅಶ್ವತ್ಥ ನಾರಾಯಣ ಸಂತಾಪ

ಬೆಂಗಳೂರು,ಸೆ.18-ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಡಾ.ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ರವರ ನಿಧನದಿಂದ ಮಾಧ್ಯಮರಂಗ ಪ್ರತಿಭಾವಂತರೊಬ್ಬರನ್ನು ಕಳೆದುಕೊಂಡಂತಾಗಿದೆ, ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಹಿರಿಯ ಪತ್ರಕರ್ತರಾದ ನಾಗರಾಜ್ ದೀಕ್ಷಿತ್ ಅವರ ನಿಧನ ತೀವ್ರ ಆಘಾತ ತಂದಿದೆ. ಸದಾ ಕ್ರಿಯಾಶೀಲರಾಗಿ ಸಮಾಜಮುಖಿ ತುಡಿತ ಹೊಂದಿದ್ದ, ಸರಳ ನಡೆ ನುಡಿಯ ಪತ್ರಕರ್ತರಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನನ್ನ ಪ್ರಾರ್ಥನೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯಲ್ಲಿ ಪತ್ರಕರ್ತರಾಗಿದ್ದ ನಾಗರಾಜ್ ದೀಕ್ಷಿತ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿ ತಮ್ಮದೇ ಛಾಪು ಮೂಡಿಸಿದ್ದರು. ಮಂಡ್ಯದ ʼಪೌರವಾಣಿʼ ಪತ್ರಿಕೆಯಿಂದ ವೃತ್ತಿ ಬದುಕು ಆರಂಭಿಸಿದ್ದ ದೀಕ್ಷಿತ್ ಅವರು, ಉಪನ್ಯಾಸಕರಾಗಿಯೂ ಕೆಲಸ ಮಾಡಿ ತಮ್ಮದೇ ಶಿಷ್ಯಬಳಗ ಹೊಂದಿದ್ದರು.

ಸದಾ ಕ್ರಿಯಾಶೀಲವಾಗಿದ್ದ ದೀಕ್ಷಿತ್ ಸಮಾಜಮುಖಿ ತುಡಿತ ಹೊಂದಿದ್ದ, ಸರಳ ನಡೆ ನುಡಿಯ ಪತ್ರಕರ್ತ. ವೃತ್ತಿ ಬಗ್ಗೆ ಅಪಾರ ಬದ್ಧತೆ. ಮಾಹಿತಿ ಕಣಜ ಎನ್ನುವಷ್ಟರ ಮಟ್ಟಿಗೆ ಸುದ್ದಿ ಮನೆಯಲ್ಲಿ ಪರಿಚಿತರಾಗಿದ್ದರು. ನಾಟಕ, ಸಾಹಿತ್ಯದಲ್ಲೂ ಅವರಿಗೆ ಅಪಾರ ಆಸಕ್ತಿ ಇತ್ತು. (ಎಂ.ಎನ್)

Leave a Reply

comments

Related Articles

error: