ಮೈಸೂರು

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಂದ ಸರ್ಕಾರಿ ಕಛೇರಿಯಲ್ಲಿ ಪಾರ್ಟಿ ಆರೋಪ : ಅಧಿಕಾರಿಯೊಬ್ಬರ ಚಿತಾವಣೆ ಎಂದ ನಿರ್ದೇಶಕರು

ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

ಮೈಸೂರು,ಸೆ.21:- ಮೈಸೂರು ಜಿಲ್ಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿರುವ ಜಿ.ಓಂಪ್ರಕಾಶ್ ಅವರು ಸರ್ಕಾರಿ ಕಚೇರಿಯಲ್ಲಿ ತಮ್ಮ ಕುಟುಂಬದವರ ಜೊತೆ ಪಾರ್ಟಿ ನಡೆಸಿದ್ದಾರೆ ಎನ್ನಲಾದ ಪಾರ್ಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಸರ್ಕಾರ ಪೂರೈಸಿರುವ ಸಮವಸ್ತ್ರಗಳನ್ನು ಅವರ ಪತ್ನಿ ಕೈಯಲ್ಲಿ ಕ್ರೀಡಾಪಟುಗಳಿಗೆ ವಿತರಿಸಲಾಗಿರುವುದು ಚಿತ್ರದಲ್ಲಿ ಕಂಡು ಬಂದಿದೆಯಲ್ಲದೇ ಕ್ರೀಡಾಪಟುಗಳ ಜೊತೆಗಿನ ಗ್ರೂಪ್ ಫೋಟೋದಲ್ಲಿಯೂ ಅವರ ಪತ್ನಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಓಂಪ್ರಕಾಶ್ ಸೆ.7ರಂದು ಕ್ರೀಡಾಂಗಣಕ್ಕೆ ಬಂದು ಅಧಿಕಾರ ವಹಿಸಿಕೊಂಡೆ. ಆ ಸಂದರ್ಭದಲ್ಲಿ ನನ್ನನ್ನು ಸ್ವಾಗತಿಸಲು ಹಾಗೂ ಅಭಿನಂದಿಸಲು ಹಲವಾರು ಮಂದಿ ಬಂದಿದ್ದರು. ಅದರಲ್ಲಿ ಸ್ನೇಹಿತರು, ಕುಟುಂಬದವರು ಇದ್ದರು. ಕೇಕ್ ತಂದು ಕತ್ತರಿಸಲು ಹೇಳಿದರು. ಇದನ್ನು ನಾನು ಹೇಗೆ ನಿರಾಕರಿಸಲಿ, ಇದು ಪಾರ್ಟಿ ಹೇಗಾಗಲಿದೆ? ಈ ವಿಚಾರವನ್ನು ಇಲಾಖೆಯ ಆಯುಕ್ತರ ಗಮನಕ್ಕೂ ತಂದಿದ್ದೇನೆ ಎಂದಿದ್ದಾರೆ.
ಹಿಂದೆ ಹಲವಾರು ವರ್ಷ ಇಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಯೊಬ್ಬರ ಚಿತಾವಣೆ ಇದು. ತಮ್ಮ ಕಡೆಯವರಿಂದ ಸ್ವಾಗತ ಕಾರ್ಯಕ್ರಮದ ಫೋಟೋ ತೆಗೆಸಿ ಇಲ್ಲಸಲ್ಲದ ಕಥೆ ಕಟ್ಟಿದ್ದಾರೆ. ಆ ವ್ಯಕ್ತಿ ಮೇಲೆ ಹಲವು ದೂರುಗಳು ಬರುತ್ತಿವೆ. ವರ್ಗಾವಣೆಯಾಗಿ ಹೋಗಿರುವ ಅವರು ಮತ್ತೆ ಇಲ್ಲಿಗೆ ಬರಲು ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆಂದು ದೂರಿದ್ದಾರೆ.
ಕೋವಿಡ್ ಕಾರಣ ಕ್ರೀಡಾ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಿಸಿರಲಿಲ್ಲ. ಆ ವಿದ್ಯಾರ್ಥಿಗಳಿಗೆ ನಾನು ವಿತರಿಸಿದೆ. ಕೋಚ್ ಹಾಗೂ ಕ್ರೀಡಾಪಟುಗಳ ಒತ್ತಾಯದ ಮೇರೆಗೆ ನನ್ನ ಪತ್ನಿ ಕೂಡ ಇಬ್ಬರಿಗೆ ಸಮವಸ್ತ್ರ ನೀಡಿದರು. ಕ್ರೀಡಾಂಗಣ ವೀಕ್ಷಿಸಲು ನನ್ನ ಕುಟುಂಬದವರು ಬಂದಿದ್ದರು ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: