ದೇಶಪ್ರಮುಖ ಸುದ್ದಿ

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ರಾಷ್ಟ್ರಪತಿ, ಮೋದಿ ಸೇರಿದಂತೆ ಗಣ್ಯರ ಸಂತಾಪ

ನವದೆಹಲಿ,ಸೆ.24-ಕೇಂದ್ರ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ರಾಮನಾಥ್ ಕೋವಿಂದ್ ಅವರು, ಕೇಂದ್ರ ರೈಲ್ವೆ ಖಾತೆ ರಾಜ್ಯಸಚಿವ ಸುರೇಶ್ ಅಂಗಡಿ ಅವರ ಹಠಾತ್ ನಿಧನದಿಂದ ದಿಗ್ಭ್ರಮೆ ಉಂಟಾಗಿದೆ. ಸ್ನೇಹ ಮನೋಭಾವದ ಮುಖಂಡರಾಗಿದ್ದ ಸುರೇಶ್ ಅಂಗಡಿ  ತಮ್ಮ ಲೋಕಸಭಾ ಕ್ಷೇತ್ರ ಬೆಳಗಾವಿ ಹಾಗೂ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ದೃಢಸಂಕಲ್ಪದ ಅವರು ಅದಮ್ಯ ಉತ್ಸಾಹ, ನಮ್ರತೆ ಮತ್ತು ಪರಿಶ್ರಮದಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅವರ ಕುಟುಂಬದವರು ಮತ್ತು ಬಂಧುಮಿತ್ರರಿಗೆ ನನ್ನ ಸಂತಾಪ ಹಾಗೂ ಪ್ರಾರ್ಥನೆಗಳು ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರು ದೀನ ದಲಿತರ ಉನ್ನತಿಗಾಗಿ ಶ್ರಮಿಸಿದ ಜನರ ನಾಯಕರಾಗಿದ್ದರು. ದುಃಖಿತ ಕುಟುಂಬ ಸದಸ್ಯರಿಗೆ ನನ್ನ ಸಂತಾಪ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

ಪಕ್ಷ ಓರ್ವ ಅಸಾಧಾರಣ ಕಾರ್ಯಕರ್ತನನ್ನು ಕಳೆದುಕೊಂಡಿದೆ ಎಂದು ದುಃಖ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದ ಸುರೇಶ್ ಅಂಗಡಿ ಅವರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಓರ್ವ ಸಮರ್ಪಿತ ಸಂಸದ ಹಾಗೂ ಪರಿಣಾಮಕಾರಿ ಸಚಿವರಾಗಿದ್ದ ಅವರು, ತಮ್ಮ ಇಲಾಖೆಯ ಜವಾಬ್ದಾರಿಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದರು ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ.

ಈ ದುಃಖದ ಘಳಿಗೆಯಲ್ಲಿ ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುವುದಾಗಿ ಹೇಳಿರುವ ಪ್ರಧಾನಿ, ಭಗವಂತ ಸುರೇಶ್ ಅಂಗಡಿ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗ ಮತ್ತು ಸ್ನೇಹಿತರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸುರೇಶ್ ಅಂಗಡಿ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ರಾಷ್ಟ್ರ ಮತ್ತು ಪಕ್ಷಕ್ಕೆ ಅವರು ಮಾಡಿದ ನಿಸ್ವಾರ್ಥ ಸೇವೆಗಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ವೈಯಕ್ತಿಕವಾಗಿ ನನಗೆ ಒಬ್ಬ ಆತ್ಮೀಯ ಸ್ನೇಹಿತರಾಗಿದ್ದರಲ್ಲದೆ, ಒಬ್ಬ ಉತ್ತಮ ಮಾರ್ಗದರ್ಶಕರಾಗಿದ್ದರು. ಉತ್ತಮ ಆರೋಗ್ಯ ಹೊಂದಿದ್ದ ಅಂಗಡಿಯವರು ಖಂಡಿತಾ ಕೊರೊನಾ ಜಯಿಸಿ ಬರುವರೆಂಬ ನನ್ನ ನಂಬಿಕೆ ಹುಸಿಯಾಯಿತು ಎಂದು ದುಃಖ ವ್ಯಕ್ತಪಡಿಸಿದ್ದಾರೆ..

ಕರ್ನಾಟಕಕ್ಕೆ ಇವರ ಕೊಡುಗೆ ಅಪಾರ ನೆನೆಗುದಿಗೆ ಬಿದ್ದಿದ್ದ ಅನೇಕ ರೈಲ್ವೆ ಯೋಜನೆಗಳಿಗೆ ಚಾಲನೆ ಕೊಡುವುದರ ಮೂಲಕ ಒಳ್ಳೆಯ ಕೆಲಸಗಳನ್ನು ಮಾಡಿದ್ದರು ಎಂದು ಬಣ್ಣಿಸಿದ್ದಾರೆ. ಇದೇ ಮೊದಲ ಬಾರಿಗೆ ನನ್ನೊಂದಿಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿ ಪ್ರಭಾವಿ ಖಾತೆಯನ್ನು ಹೊಂದಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದರು ಎಂದು ಅಂಗಡಿಯವರನ್ನು ಸ್ಮರಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: