ಮೈಸೂರು

ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಕಡ್ಡಾಯ ಅವಕಾಶ ಕಲ್ಪಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.24:-ಮೈಸೂರು ದಸರಾ ಮಹೋತ್ಸವ-2020 ಯಲ್ಲಿ ನಡೆಯುವ ಏಳು ವಿವಿಧ ಸಭಾಂಗಣಗಳಲ್ಲಿ ಸಾಂಸ್ಕೃತಿಕಾರ್ಯಕ್ರಮಗಳನ್ನು ರದ್ದುಪಡಿಸಬಾರದೆಂದು ಮತ್ತು ಮೈಸೂರು ಅರಮನೆ ವೇದಿಕೆಯಲ್ಲಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಕಡ್ಡಾಯವಾಗಿ ಅವಕಾಶ ಕಲ್ಪಿಸುವಂತೆ ಹಾಗೂ ವೃತ್ತಿ ಕಲಾವಿದರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೋವಿಡ್ ಪಿಡುಗಿನಿಂದ ಕಾರ್ಯಕ್ರಮಗಳಿಗೆ ಅವಕಾಶವಿಲ್ಲದೆ ವೃತ್ತಿಪರ ಕಲಾವಿದರು ಕಂಗಾಲಾಗಿದ್ದಾರೆ. ಅವರಿಗೆ ಜೀವನ ನಡೆಸುವುದೂ ಕಷ್ಟವಾಗಿದೆ. ಸರ್ಕಾರವು ಕಲಾವಿದರ ಹಿತಾಸಕ್ತಿಯನ್ನು ಕಡೆಗಣಿಸಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ವೃತ್ತಿಪರ ಕಲಾವಿದರ ಹಿತಾಸಕ್ತಿಯನ್ನು ಕಾಪಾಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕಲಾಮಂದಿರ,ಕಿರುರಂಗಮಂದಿರ, ಜಗನ್ ಮೋಹನ್ ಪ್ಯಾಲೇಸ್, ಚಿಕ್ಕಗಡಿಯಾರ, ಗಾನಭಾರತಿ ವೀಣೇಶೇಷಣ್ಣ ಭವನ, ಪುರಭವನ, ನಾದಬ್ರಹ್ಮ ಸಂಗೀತ ಸಭಾಂಗಣ ಈ ಏಳು ವೇದಿಕೆಗಳಲ್ಲಿ ದಸರಾದ 9ದಿನಗಳೂ ಕಾರ್ಯಕ್ರಮವನ್ನು ಮುಂದುವರಿಸಬೇಕು. ಕೊರೋನಾ ನೆಪವೊಡ್ಡಿ ಕಾರ್ಯಕ್ರಮ ರದ್ದುಪಡಿಬಾರದೆಂದರು. ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರ ಸಂಭಾವನೆಯನ್ನು ಹೆಚ್ಚಿಸಿ ಗೌರವಯುತ ಜೀವನಕ್ಕೆ ಅನುವು ಮಾಡಿಕೊಡಬೇಕು. ನಿರ್ಲಕ್ಷಿತ, ಅಶಕ್ತ, ಕಲಾವಿದ ಹಿತಾಸಕ್ತಿಗಾಗಿ ರಾಜ್ಯಮಟ್ಟದಲ್ಲಿ ಕಲಾವಿದರ ಪ್ರಾಧಿಕಾರ ರಚನೆ ಮಾಡಿ ವೃತ್ತಿ ಕಲಾವಿದರು ಮತ್ತು ಅವರ ಕುಟುಂಬದವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ನೈಜ ಕಲಾವಿದರನ್ನು ಗುರುತಿಸಿ ಇಲಾಖೆಯ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಿರಿಯ, ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು 5000ರೂ.ಗೆ ಹೆಚ್ಚಳ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಮುಖ ಉದ್ಯಾನವನಗಳಲ್ಲಿ ನಡೆಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಹಿಂದಿನಂತೆ ಆಯೋಜನೆ ಮಾಡಿ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ.ಜಾತಿ,ಪ.ವರ್ಗಗಳ ಕಲಾವಿದರಿಗೆ ವಿಶೇಷ ಯೋಜನೆಯಡಿ ಅನುದಾನವನ್ನು ಹೆಚ್ಚಿಸಿ ಧನ ಸಹಾಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜನೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಎಸ್.ಜಯರಾಜು, ಉಪಾಧ್ಯಕ್ಷ ಬಿ.ಎನ್.ಜನಾರ್ದನ್, ಪ್ರಧಾನಕಾರ್ಯದರ್ಶಿ ಎಂ.ಪುಟ್ಟಸ್ವಾಮಿ, ಸಹಕಾರ್ಯದರ್ಶಿ ಶ್ರೀಕಂಠರಾವ್ ಬಿ, ಖಜಾಂಚಿ ರಾಜು ಎಸ್, ನಿರ್ದೇಶಕರುಗಳಾದ ಗಣೇಶ್ ಈಶ್ವರ್ ಭಟ್, ಮೇರಿ ಬೆಸಿಲಿಕಾ, ಎಂ.ಕೃಷ್ಣರಾವ್, ಆರ್.ಶಿವಕುಮಾರ್, ವಿ.ಜಗದೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: