ಮೈಸೂರು

ಮಕ್ಕಳ ಪ್ರತಿಭೆಯ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಬೇಕು : ಹೆಚ್.ಎಸ್.ಉಮೇಶ್

ಇಂದಿನ ಮಕ್ಕಳು ತುಂಬಾ ಮುಂದಿದ್ದು ಪೋಷಕರು ಮಕ್ಕಳ ಕೌಶಲ, ಪ್ರತಿಭೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು ಎಂದು ಹಿರಿಯ ರಂಗಕರ್ಮಿ ಹೆಚ್.ಎಸ್.ಉಮೇಶ್ ಅಭಿಪ್ರಾಯಪಟ್ಟರು.

ಬುಧವಾರ ಮೈಸೂರಿನ  ಜೆಎಸ್‍ಎಸ್ ಮಹಾವಿದ್ಯಾಪೀಠ, ಜೆಎಸ್‍ಎಸ್ ಕಲಾಮಂಟಪದ ಸಹಯೋಗದಲ್ಲಿ ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಎಳೆಯರ ಮೇಳ-2017ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕಾಲದ ಮಕ್ಕಳಿಗೂ ಇಂದಿನ ಕಾಲದ ಮಕ್ಕಳಿಗೂ ತುಂಬಾ ವ್ಯತ್ಯಾಸವಿದೆ. ಅಂದು ತಂತ್ರಜ್ಞಾನದ ಅರಿವೇ ಇರಲಿಲ್ಲ. ಆದರೆ, ಇಂದಿನ ಮಕ್ಕಳು ತಂತ್ರಜ್ಞಾನವಿಲ್ಲದೆ ಇರುವುದಿಲ್ಲ. ಪೋಷಕರಿಗಿಂತಲೂ ಮಕ್ಕಳು ತುಂಬಾ ಮುಂದಿದ್ದಾರೆ. ಹಾಗಾಗಿ ಪೋಷಕರು ತಮ್ಮಲ್ಲಿನ ಪ್ರತಿಭೆ ಕೌಶಲಗಳನ್ನು ಧಾರೆ ಎರೆದು ಮಕ್ಕಳನ್ನು ಹೇಗೆ ಕ್ರಿಯಾಶೀಲರನ್ನಾಗಿ ಮಾಡಬೇಕು ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಇಂದಿನ ಕಾಲಘಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಶಾಲಾ ರಜಾ ದಿನಗಳಲ್ಲಿ ಬೇಸಿಗೆ ಶಿಬಿರಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಶಿಬಿರಗಳಿಗೆ ಸೇರಿಸಲು ಮಧ್ಯರಾತ್ರಿಯಿಂದಲೇ ಕ್ಯೂ ನಿಲ್ಲುತ್ತಾರೆ ಎಂದರೆ ಶಿಬಿರಗಳ ಮಹತ್ವ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಶಾಲೆಗಳಂತೆ ಶಿಬಿರಗಳ ಮೇಲೂ ಗುರುತರ ಜವಾಬ್ದಾರಿಯಿದ್ದು  ಮಕ್ಕಳ ಕೌಶಲ, ಪ್ರತಿಭೆಗಳಿಗೆ ಶಿಬಿರಗಳು ತಳಹದಿ ಒದಗಿಸುತ್ತವೆ. ಇಲ್ಲಿ ಪ್ರತಿನಿತ್ಯ, ನಾಟಕ, ನೃತ್ಯ, ಸಂಗೀತ, ಅಭಿನಯ ಸೇರಿದಂತೆ ಅನೇಕ ಕಲೆಗಳನ್ನು ಹೇಳಿಕೊಡಲಾಗುತ್ತದೆ. ಮಕ್ಕಳ ಸ್ವಂತಿಕೆಯನ್ನು ಗುರುತಿಸಿ ಅದಕ್ಕೆ ನೀರೆರೆದು ಬೆಳೆಸುವ ಕೆಲಸವನ್ನು ಶಿಬಿರಗಳು ಮಾಡುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಂಗಪೋಷಕಿ ವಿಜಯಲಕ್ಷ್ಮಿ, ಕಾರ್ಯಕ್ರಮ ಸಂಯೋಜಕ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: