ಪ್ರಮುಖ ಸುದ್ದಿ

ಎಲ್ಲಾ ಜ್ಞಾನಭಂಡಾರಕ್ಕೆ ಜಾನಪದವೇ ಜೀವಾಳ : ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ

ರಾಜ್ಯ( ಮಂಡ್ಯ)ಸೆ.26:- ಎಲ್ಲಾ ಜ್ಞಾನಭಂಡಾರಕ್ಕೆ ಜಾನಪದವೇ ಜೀವಾಳ. ಅದು ಗುರುವಿನ ಸ್ಥಾನದಲ್ಲಿದೆ ಎಂದು ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಹೇಳಿದರು.

ಗಾಂಧಿ ಸ್ಮಾರಕ ಟ್ರಸ್ಟ್‌ ವತಿಯಿಂದ ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಡಾ.ಅರ್ಜುನಪುರಿ ಅಪ್ಪಾಜಿಗೌಡ 4ನೇ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನಮ್ಮ ಹಿರಿಯ ತಲೆಮಾರಿನ ಜನರನ್ನು ಅನಕ್ಷರಸ್ಥರು ಎಂದು ಉಡಾಫೆಯಾಗಿ ಹೇಳುವುದು ಸರಿಯಲ್ಲ. ಅವರು ಬದುಕಿದ ರೀತಿಯಲ್ಲಿ ಪ್ರೌಢಿಮೆ ಇತ್ತು. ಅವರು ಬಳಸಿದ ವಸ್ತುಗಳ ಹಿಂದೆ ತಂತ್ರಜ್ಞಾನವಿತ್ತು. ಜ್ಞಾನವನ್ನು ಗೂಢ ರೀತಿಯಲ್ಲಿ ಅನಾವರಣಗೊಳಿಸುತ್ತಿದ್ದರು. ಅಜ್ಞಾತ ವ್ಯಕ್ತಿಗಳು ಕೊಟ್ಟಿರುವ ಸಾಹಿತ್ಯವು ಜ್ಞಾನ ಪರಂಪರೆಗೆ ಮೌಲಿಕ ಅಡಿಪಾಯ ಹಾಕಿಕೊಟ್ಟಿದೆ ಎಂದರು.

ಸಾಹಿತಿ ಡಾ.ನಂಜಯ್ಯ ಹೊಂಗನೂರು ಮಾತನಾಡಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಭಂಡಾರವನ್ನು ಶ್ರೀಮಂತಗೊಳಿಸಿದ ಕೀರ್ತಿ ಕ್ಯಾತನಹಳ್ಳಿ ರಾಮಣ್ಣ ಅವರಿಗೆ ಸಲ್ಲಬೇಕು. ಅವರ ಕ್ಷೇತ್ರ ಕಾರ್ಯ, ಸರಳ ಜೀವನ ಮಾದರಿಯಾದುದು. ಮೌಖಿಕ ಪರಂಪರೆಯ ಶಬ್ದಗಳು ಮರೆಯಾಗುತ್ತಿರುವ ಕಾಲದಲ್ಲಿ ರಾಮಣ್ಣ ಅವರು ಜಾನಪದ ನಿಘಂಟು ಹೊರತಂದು ಶಬ್ದಗಳ ಅರ್ಥ ವಿವರಣೆ ಮಾಡಿದರು. ಈ ಕಾರಣಕ್ಕೆ ಅವರನ್ನು ಜಾನಪದ ಕ್ಷೇತ್ರದ ಕಿಟಲ್‌ ಎಂದೇ ಕರೆಯಬೇಕು ಎಂದರು.

ಸುಶೀಲಾ ಡಾ.ಪಾ.ಶ. ಶ್ರೀನಿವಾಸ ಅಭಿಮಾನಿ ಬಳಗ, ಮಧುರೈ ಕರ್ನಾಟಕ ಸಂಘದ ವತಿಯಿಂದ ಸಾಹಿತಿ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಅವರಿಗೆ ಸುಶೀಲಾ ಡಾ.ಪಾ.ಶ.ಶ್ರೀ ಸ್ಮಾರಕ ದತ್ತಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಾಧ್ಯಾಪಕ ಮ.ರಾಮಕೃಷ್ಣ, ಪ್ರದೀಪ್‌ ಕುಮಾರ್‌ ಹೆಬ್ರಿ , ಡಾ.ಮೋಹನ ಕುಂಟಾರ್, ಡಾ. ಎಸ್. ಶ್ರೀನಿವಾಸ ಶೆಟ್ಟಿ, ಡಾ.ಆನಂದರಾಮ ಉಪಾಧ್ಯ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: