ಮೈಸೂರು

ಮಹಾಜನ ಕಾಲೇಜಿನಲ್ಲಿ ಗಾನಗಾರುಡಿಗ ಡಾ. ಎಸ್.ಪಿ.ಬಿ ಅವರಿಗೆ ಶ್ರದ್ಧಾಂಜಲಿ

ಮೈಸೂರು,ಸೆ.26:- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಎಸ್.ಪಿ.ಬಿ. ಅವರನ್ನು ಕುರಿತು ಮಾತನಾಡಿ ಭಾರತದ ಸಂಗೀತ ಲೋಕದ ಮೇರು ಪರ್ವತ, ಸ್ವರಸಾಮ್ರಾಟ, ಸಂಗೀತ ಮಾಂತ್ರಿಕರಾಗಿ ಎಸ್.ಪಿ.ಬಿ. ಅವರು ತಮ್ಮ 54 ವರ್ಷಗಳ ಸುಧೀರ್ಘ ಗಾಯನ ಗಾರುಡಿಗನಾಗಿ 16 ಭಾಷೆಗಳಲ್ಲಿ ಸುಮಾರು 40,000ಕ್ಕೂ ಹೆಚ್ಚು ಹಾಡುಗಳನ್ನು ವಿವಿಧ ಚಲನ ಚಿತ್ರಗಳಲ್ಲಿ ಹಾಡುವ ಮೂಲಕ ವಿವಿಧ ಮೇರು ನಟರಿಗೆ ಹಿನ್ನೆಲೆಗಾಯಕರಾಗಿ ತಮ್ಮ ಧ್ವನಿ ನೀಡಿದ್ದಾರೆ.
ಸೌಮ್ಯ, ಸರಳ ಹಾಗೂ ಶಿಸ್ತು ಜೀವನ, ಮಿತ ಮಾತುಗಾರಿಕೆ, ಮಾನವೀಯತೆಯ ಸಾಕಾರಮೂರ್ತಿ, ಸಂಸ್ಕಾರವಂತರಾಗಿ ಎಸ್.ಪಿ.ಬಿ. ಅವರ ವ್ಯಕ್ತಿತ್ವ ಸರ್ವರಿಗೂ ಆದರ್ಶಪ್ರಾಯವಾಗಿದೆ. ಯಾವ ಸಂಗೀತ ಗುರುಗಳ ಮಾರ್ಗದರ್ಶನ ಮತ್ತು ತರಬೇತಿಯೂ ಇಲ್ಲದೆ ಭಾರತ ಕಂಡ ಶ್ರೇಷ್ಠ ಹಿಂದಿ ಗಾಯಕರಾದ ಮಹಮ್ಮದ್ ರಫೀ ಅವರನ್ನು ತಮ್ಮ ದ್ರೋಣಚಾರ್ಯ ಎಂದು ಅಮೂರ್ತವಾಗಿ ಆರಾಧಿಸುತ್ತಾ, ಏಕಲವ್ಯನಂತೆ ಸುಮಾರು 5 ದಶಕಗಳ ಕಾಲ ಭಾರತದ ಸಂಗೀತ ಪ್ರಿಯರಿಗೆ ತಮ್ಮ ಅದ್ಭುತ ಹಾಡುಗಳ ಮೂಲಕ ರಸದೌತಣವನ್ನು ಉಣಬಡಿಸಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾಗಿದ್ದ ಎಸ್.ಪಿ.ಬಿ. ಅವರು ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆ, ಸಂಗೀತ ಹಾಗೂ ಕನ್ನಡದ ಮೇರು ನಟರು ಹಾಗೂ ಕವಿಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕನ್ನಡಿಗರು ನನ್ನ ಮೇಲೆ ಇಟ್ಟಿರುವ ಪ್ರೀತಿ, ಗೌರವ, ಅಭಿಮಾನ ನನಗೆ ನೂರು ಭಾರತರತ್ನ ಪ್ರಶಸ್ತಿಗಳಿಗೆ ಸಮಾನ ಎಂದು ಸ್ವತಃ ಎಸ್.ಪಿ.ಬಿ. ಅವರು ಹೇಳಿರುವುದು ನಿದರ್ಶನವಾಗಿದೆ. ಗಾಯನ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಿದ ಅತ್ಯದ್ಭುತ ಕೊಡುಗೆ ಮತ್ತು ಸಾಧನೆಗಾಗಿ 6 ಬಾರಿ ರಾಷ್ಟ್ರಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಶ್ರೀಯುತರು ಹಾಡಿರುವ ಹಾಡುಗಳನ್ನು ದಿನಕ್ಕೆ ಒಂದರಂತೆ ಕೇಳುವುದಾದರೆ ಸುಮಾರು 103 ವರ್ಷಗಳ ಸುದೀರ್ಘ ಆಯಸ್ಸನ್ನು ಒಬ್ಬ ವ್ಯಕ್ತಿ ಪಡೆಯಬೇಕಾಗುತ್ತದೆ. ಎಸ್.ಪಿ.ಬಿ. ಅವರ 74 ವರ್ಷಗಳ ಸುದೀರ್ಘ ಸಾರ್ಥಕ ಬದುಕು ಒಂದು ತೆರೆದ ಪುಸ್ತಕವಾಗಿತ್ತು. ಇಂದಿನ ಅನೇಕ ಯುವ ಗಾಯಕರಿಗೆ ಎಸ್.ಪಿ.ಬಿ. ಅವರು ಒಂದು ವಿಶ್ವಕೋಶ ಹಾಗೂ ಸಂಗೀತ ವಿಶ್ವವಿದ್ಯಾನಿಲಯವೇ ಆಗಿದ್ದಾರೆ.
ದುರಾದೃಷ್ಟಾವಶಾತ್ ಕೋವಿಡ್-19 ಮಹಾಮಾರಿಗೆ ತುತ್ತಾಗಿ ಸುಮಾರು 51 ದಿನಗಳ ಕಾಲ ಸಾವು ಮತ್ತು ಬದುಕಿನ ನಡುವೆ ಹೋರಾಟ ನಡೆಸಿ ತಮ್ಮ ಕೊನೆಯುಸಿರೆಳೆಯುವ ಮೂಲಕ ಸಂಗೀತ ಸಾರಸ್ವತ ಲೋಕದಿಂದ ದೂರವಾಗಿದ್ದು, ಅವರು ಹಾಡಿರುವ ಸಹಸ್ರಾರು ಹಾಡುಗಳು ಭವಿಷ್ಯದಲ್ಲಿ ಕೋಟ್ಯಾಂತರ ಸಂಗೀತ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲೇ ಹುಟ್ಟಬೇಕೆಂಬ ಅವರ ಕನಸು ಈಡೇರಲು ಭಗವಂತ ಅವರಿಗೆ ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರುವಂತೆ ಕರುಣಿಸಲಿ ಎಂದು ಆಶಿಸಿದರು.
ಸಂಗೀತ ಗಾರುಡಿಗನಿಗೆ ಕಾಲೇಜಿನ ಸಮಸ್ತ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿವರ್ಗದವರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: