ಮೈಸೂರು

ಅಹಿಂಸಾ ವೇದಿಕೆಯ ಪ್ರತಿಭಟನೆಗೆ ಸಂಘ ಪರಿವಾರ ಕೈವಾಡ ಶಂಕೆ

ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲು ಅಹಿಂಸಾ ವೇದಿಕೆ ಸೋಮವಾರ ನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಆರ್‍ಎಸ್‍ಎಸ್‍, ಸಂಘ ಪರಿವಾರ ಹಾಗೂ ಜಾತಿವಾದಿಗಳ ಕೈವಾಡವಿದೆ ಎಂದು ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಅಚ್ಛೇ ದಿನ್ ಎನ್ನುವುದು ಸ್ಪಷ್ಟ ಧ್ಯೇಯೋದ್ದೇಶವಿಲ್ಲದ ಘೋಷಣೆಯಾಗಿದೆ. ಸುಪ್ರೀಂ ಕೋರ್ಟ್‍ನ ಮೀಸಲಾತಿ ವಿರೋಧಿ ತೀರ್ಪು ಹಿಂದುಳಿದ ಶೋಷಿತ ವರ್ಗಗಳಿಗೆ ಮಾರಕವಾಗಿದೆ. ಅಲ್ಲದೆ, ದಲಿತರನ್ನು ತನ್ನ ಕಬಂಧ ಬಾಹುಗಳಿಗೆ ಸೆಳೆದು ಮನುವಾದಿಗಳ ಕೈಯಲ್ಲಿ ಸಿಲುಕಿಸುವ ಹುನ್ನಾರವೆಂದರು. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಮುಂದಿರಿಸಿಕೊಂಡಿರುವ ಕೇಂದ್ರ ಹಿಂದುಳಿದವರಲ್ಲಿಯೂ ಕ್ಷಿಪ್ರಗತಿಯ ಬದಲಾವಣೆ ತರಲು ಯತ್ನಿಸುತ್ತಿದೆ ಎಂದರು. ಈಚೆಗೆ ಗುಜರಾತ್ ರಾಜ್ಯ ಸರ್ಕಾರ ಅಂಗೀಕರಿಸಿದ ಗೋ-ಹತ್ಯೆ ನಿಷೇಧ ಕಾಯ್ದೆ ಮನುಕುಲದ ದಬ್ಬಾಳಿಕೆ. ಕಾಯ್ದೆಯಿಂದ ಶೋಷಿತರ ವಿರುದ್ಧ ಶೋಷಿತರನ್ನೇ ಎತ್ತಿಕಟ್ಟುವ ಹುನ್ನಾರವೆಂದು ಕಿಡಿಕಾರಿದ ಅವರು ಜೀವಪರ ಚಿಂತಕರೆಲ್ಲಾ ಒಂದು ವೇದಿಕೆಯ ಮೂಲಕ ಜನಾಂದೋಲನವನ್ನು ಸಂಘಟಿಸಬೇಕೆಂದು ಕರೆ ನೀಡಿದರು.

ಮುಖಂಡರಾದ ಚಿಕ್ಕಜವರಯ್ಯ, ಬಿ.ರಾಚಯ್ಯ, ಡಾ.ಮೋಹನ್ ಕೋಟೆಕರೆ, ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್))

Leave a Reply

comments

Related Articles

error: