ಮೈಸೂರು

ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆ : ರಾಜ್ಯ ಸರ್ಕಾರದ ಕಾರ್ಯ ವೈಖರಿಯ ವಿರುದ್ಧ ಶಾಸಕ ಸಾ. ರಾ. ಮಹೇಶ್ ಟೀಕಾಪ್ರಹಾರ

ಮೈಸೂರು,ಸೆ.29:- ಮೈಸೂರಿನ ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆ ಕುರಿತು ಶಾಸಕ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇವಲ 29 ದಿನಗಳ ಅವಧಿಯಲ್ಲಿ ಆಂಧ್ರದ ಓರ್ವ ಹೆಣ್ಣು ಮಗಳಿಗೋಸ್ಕರ, ಕನ್ನಡಿಗ, ದಲಿತ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದೇ ರಾಜ್ಯ ಸರ್ಕಾರದ ಅತಿದೊಡ್ಡ ಸಾಧನೆಯಾಗಿದೆ. ಮೈಸೂರು ದಸರಾ ಉನ್ನತಮಟ್ಟದ ಮಟ್ಟದ ಸಭೆ ನಡೆದ ಬಳಿಕ, ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನೇ ವರ್ಗಾವಣೆ ಮಾಡಿರುವುದು ಇದೇ ಮೊದಲು. ಹಿಂದೆಂದೂ ಕೂಡ ಮೈಸೂರು ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರಲಿಲ್ಲ ಎಂದು ರಾಜ್ಯ ಸರ್ಕಾರದ ಕಾರ್ಯ ವೈಖರಿಯ ವಿರುದ್ಧ ಶಾಸಕ ಸಾ. ರಾ. ಮಹೇಶ್ ಟೀಕಾಪ್ರಹಾರ ನಡೆಸಿದರು.
ಜಿಲ್ಲಾಧಿಕಾರಿ ಬದಲಾವಣೆ ಆದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಕಳೆದ 29 ದಿನಗಳಿಂದ ಮೈಸೂರಿನಲ್ಲಿ ಯಾವುದೇ ಬಿಲ್ ಗಳು ಪಾಸ್ ಆಗಿರಲಿಲ್ಲ. ಕೆಲವೊಂದು ಪ್ರಕ್ರಿಯೆಗಳು ಮುಗಿದ ಬಳಿಕ ಜಿಲ್ಲಾಧಿಕಾರಿ ಬಿಲ್ ಗಳಿಗೆ ಸಹಿ ಹಾಕಬೇಕಾಗಿರುತ್ತದೆ. ಆ ಎಲ್ಲಾ ವಿಧಿಗಳು ಪೂರ್ಣಗೊಳ್ಳುವ ಸಮಯದಲ್ಲಿ ಏಕಾಏಕಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ.ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ ಎಂದರು. ರೋಹಿಣಿ ಸಿಂಧೂರಿಗೆ ಜಿಲ್ಲಾಧಿಕಾರಿಯಾಗೇ ಇರಬೇಕೆಂಬ ಹಠ ಇದೆ. ಐಎಎಸ್ ಅಧಿಕಾರಿಗಳು ದೇಶದಲ್ಲಿ ಎಲ್ಲಿ ಹಾಕಿದರೂ ಹೋಗಬೇಕು. ಜಿಲ್ಲಾಧಿಕಾರಿಯಾಗೇ ಇರಬೇಕೆಂದು ಮೈಸೂರಿಗೆ ವರ್ಗ ಮಾಡಿಸಿಕೊಂಡಿದ್ದಾರೆ. ಇಂತಹ ಅಧಿಕಾರಿಯಿಂದ ಹೇಗೆ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯ. ಶರತ್ ದಲಿತ ಕನ್ನಡಿಗ ಎಂದು ಪುನರುಚ್ಛರಿಸಿದರು.
175 ಕೋಟಿ ವೆಚ್ಚದಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ವೇಳೆ ಹಾಸನ ಜಿಲ್ಲಾಧಿಕಾರಿಯಾಗಿ ಹೋಗಿದ್ದರು. ಈಗ ವಿಶ್ವ ವಿಖ್ಯಾತ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಐಎಎಸ್ ಅಧಿಕಾರಿ ಅಕ್ರಂಪಾಷ ಗೆ ನಿವಾಸ ಬಿಟ್ಟುಕೊಡದೆ ಸತಾಯಿಸಿದ್ದರು. ಇದು ಕೇವಲ ಶರತ್‌‌ಗೆ ಆದ ಅಪಮಾನವಲ್ಲ. ಇಡೀ ಕನ್ನಡಿಗರಿಗೆ, ಕನ್ನಡಿಗ ಐಎಎಸ್ ಅಧಿಕಾರಿಗಳಿಗೆ ಆದ ಅವಮಾನ. ಬೇರೆ ರಾಜ್ಯದ ಸಿಎಂ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲಾಗಿದೆ ಅಂತ ಮಾಹಿತಿ ಇದೆ ಎಂದು ತಿಳಿಸಿದರು
ಶರತ್ ಅವರನ್ನು ಮೈಸೂರಿಗೆ ಪೋಸ್ಟಿಂಗ್ ಮಾಡಬಾರದಿತ್ತು. ಮಾಡಿದ ಬಳಿಕ ಇದೀಗ ಅವಮಾನ ಮಾಡಿದ ಹಾಗೆ ಆಯಿತು. ಓರ್ವ ಡಿಸಿಯಾಗಿ ಅವರ ಮನಸ್ಸು ಎಷ್ಟು ನೋವು ಅನುಭವಿಸಿರತ್ತೆ. ಕನ್ನಡದಲ್ಲಿ ಐಎಎಸ್ ಮಾಡುವವರ ಸಂಖ್ಯೆಯೇ ವಿರಳ. ಅಂತಹುದರಲ್ಲಿ ಆಂಧ್ರದ ಮಹಿಳೆಗಾಗಿ ಕನ್ನಡಿಗನಿಗೆ ಅವಮಾನ ಮಾಡ್ತಿದ್ದಾರೆ. ರಾಜ್ಯದಲ್ಲಿ ಆಂಧ್ರ ಸಿಎಂ ಸರ್ಕಾರ ನಡೆಯುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ನಮ್ಮ ರಾಜ್ಯದಲ್ಲಿ ಯಡ್ಯೂರಪ್ಪ ಆಡಳಿತ ನಡಸುತ್ತಿದ್ದಾರಾ? ಅಥವಾ ಆಂಧ್ರದ ಸಿಎಂ ಆಡಳಿತ ನಡೆಸುತ್ತಿದ್ದಾರಾ ಎಂದು ಪ್ರಶ್ನಿಸಿದರಲ್ಲದೆ ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ಅದರ ಭಾಗವಾಗಿ ರೋಹಿಣಿ ಸಿಂಧೂರಿ ವರ್ಗಾವಣೆ ಆಗಿದೆ ಎಂದು ಆರೋಪಿಸಿದರು.
(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: