ದೇಶಪ್ರಮುಖ ಸುದ್ದಿ

ನಮಾಮಿ ಗಂಗೆ ಯೋಜನೆಯಡಿ ಆರು ಬೃಹತ್ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ,ಸೆ.29-ನಮಾಮಿ ಗಂಗೆ ಯೋಜನೆಯಡಿ ಆರು ಬೃಹತ್ ಯೋಜನೆಗಳಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಉತ್ತರಾಖಂಡದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರು ಬೃಹತ್ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ಇದರಲ್ಲಿ 68 ಎಂಎಲ್‌ಡಿ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣ(ಎಸ್‌ಟಿಪಿ), ಹರಿದ್ವಾರದ ಚಾಂಡಿ ಘಾಟ್‌ನಲ್ಲಿ ಗಂಗಾ ಅವಲೋಕನ್ ವಸ್ತು ಸಂಗ್ರಹಾಲಯ, ಹರಿದ್ವಾರದ ಜಗ್ಜೀತ್‌ಪುರದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ 27 ಎಂಎಲ್‌ಡಿ ಎಸ್‌ಟಿಪಿ ಘಟಕಗಳ ನವೀಕರಣ, ಸರಾಯ್‌ನಲ್ಲಿ 18 ಎಂಎಲ್‌ಡಿ ಎಸ್‌ಟಿಪಿ ಯೋಜನೆಗಳ ನಿರ್ಮಾಣ ಸೇರಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಇದೇ ವೇಳೆ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಮತ್ತು ವೈಲ್ಡ್ ಲೈಫ್ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ ಸಿದ್ಧಪಡಿಸಿರುವ ರೋಯಿಂಗ್ ಡೌನ್ ದಿ ಗಂಗಾ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಗ್ರಾಮ ಪಂಚಾಯತ್‌ಗಳಿಗಾಗಿ ಜಲ್ ಜೀವನ್ ಮಿಷನ್ ಮತ್ತು ಮಾರ್ಗದರ್ಶಿಕಾ, ಪಾಣಿ ಸಮಿತಿ ವೆಬ್‌ಸೈಟ್‌ನ್ನು ಅನಾವರಣಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಗಂಗಾ ನದಿ ಸಮೀಪದ ಹದಿನೇಳು ಪಟ್ಟಣಗಳಲ್ಲಿ ಮಾಲಿನ್ಯ ನಿಯಂತ್ರಿಸಲು ಉತ್ತರಾಖಂಡದಲ್ಲಿ ಎಲ್ಲಾ ಮೂವತ್ತು ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ‘ನಮಾಮಿ ಗಂಗೆ’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಗಂಗಾ ನದಿ ಶುದ್ಧೀಕರಣ, ನದಿ ವ್ಯಾಪ್ತಿಯಲ್ಲಿ ಮಾಲಿನ್ಯದ ಪ್ರಮಾಣವನ್ನು ತಗ್ಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ತ್ಯಾಜ್ಯ ನಿರ್ವಹಣೆ, ನದಿ ಪಾತ್ರ ಅಭಿವೃದ್ಧಿ, ಅರಣ್ಯೀಕರಣ, ಗ್ರಾಮೀಣ ನೈರ್ಮಲ್ಯ ಸೌಲಭ್ಯ, ಜೀವಸಂಕುಲಗಳ ರಕ್ಷಣೆ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಯೋಜನೆ ಒಳಗೊಂಡಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: