ಕರ್ನಾಟಕಪ್ರಮುಖ ಸುದ್ದಿ

ಸಚಿವರು, ಶಾಸಕರಿಗೆ ಕೋವಿಡ್ ಪಾಸಿಟಿವ್: ಅಧಿವೇಶನದಲ್ಲಿ ಭಾಗಿಯಾದವರಿಗೆ ಶುರುವಾಯ್ತು ಆತಂಕ

ಬೆಂಗಳೂರು,ಸೆ.29-ವಿಧಾನಮಂಡಲ ಅಧಿವೇಶನ ಕೊನೆಗೊಂಡ ಬೆನ್ನಲ್ಲೇ ಸಚಿವ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್ ಶಾಸಕರಾದ ಎಚ್‌.ಕೆ.ಪಾಟೀಲ್‌ ಹಾಗೂ ದಿನೇಶ್ ಗುಂಡೂರಾವ್‌ ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಇದರಿಂದ ಇದೀಗ ಇತರರಲ್ಲಿ ಕೋವಿಡ್ ಆತಂಕ ಶುರುವಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿತ್ತು. ಅಧಿವೇಶನದಲ್ಲಿ ಭಾಗಿಯಾಗುವ ಎಲ್ಲಾ ಸದಸ್ಯರಿಗೆ ತಪಾಸಣೆ ಕಡ್ಡಾಯವಾಗಿತ್ತು. ಸದನದಲ್ಲಿ ಸದಸ್ಯರು ಕುಳಿತುಕೊಳ್ಳುವ ಆಸನಗಳ ನಡುವೆ ಫೈಬರ್‌ ಗ್ಲಾಸ್ ಅಳವಡಿಸಲಾಗುತ್ತು. ಅಲ್ಲದೆ ಮಾಸ್ಕ್‌ ಕಡ್ಡಾಯಗೊಳಿಸಲಾಗುತ್ತು. ಶಾಸಕರು ಮಾತನಾಡುವಾಗ ಮಾಸ್ಕ್ ಧರಿಸದೆ ಇದ್ದಾಗ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ಆದರೂ ಕೆಲವು ಸಚಿವರು, ಶಾಸಕರಿಗೆ ಕೋವಿಡ್ ಪಾಸಿಟಿವ್ ಆಗಿದೆ.

ಅಧಿವೇಶನಕ್ಕೆ ಮೊದಲು ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ಸುಮಾರು 25 ಮಂದಿ ಸದಸ್ಯರಿಗೆ ಕೋವಿಡ್ ಬಂದಿತ್ತು. ಈ ಕಾರಣಕ್ಕಾಗಿ ಅವರು ಯಾರೂ ಅಧಿವೇಶನಕ್ಕೆ ಹಾಜರಾಗಿರಲಿಲ್ಲ. ಅಧಿವೇಶನದ ಕೊನೆಯ ದಿನದಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಧಿವೇಶನಕ್ಕೆ ಹಾಜರಾಗಿದ್ದರು. ಅವರಿಗೆ ಕೋವಿಡ್ ನೆಗೆಟಿವ್ ಬಂದಿತ್ತು. ಅಧಿವೇಶನ ಆರಂಭಗೊಂಡ ಎರಡನೇ ದಿನದಂದು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತು.

ಕೋವಿಡ್‌ ಆತಂಕದ ನಡುವೆಯೂ ವಿಧಾನ ಮಂಡಲ ಅಧಿವೇಶನ ಭಾನುವಾರ ಮುಕ್ತಾಯಗೊಂಡಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದಾಗಿ ಅಧಿವೇಶನವನ್ನು ಆರು ದಿನಗಳಿಗೆ ಮೊಟಕುಗೊಳಿಸಲಾಗಿತ್ತು. (ಎಂ.ಎನ್)

Leave a Reply

comments

Related Articles

error: