ಮೈಸೂರು

ಮಹಿಷ ದಸರಾ ಆಚರಣೆಗೆ ಬಿಜೆಪಿ ಎಸ್.ಸಿ.ಮೋರ್ಚಾ ಪದಾಧಿಕಾರಿಗಳ ವಿರೋಧ

ಮೈಸೂರು,ಸೆ.29:- ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೇಳೆಯಲ್ಲಿ ಮಹಿಷ ದಸರಾ ಆಚರಣೆಯನ್ನು ಬಿಜೆಪಿ ಪದಾಧಿಕಾರಿಗಳು ಖಂಡಿಸಿದರು. ಮೈಸೂರು ದಸರಾ ಸಾಂಸ್ಕೃತಿಕ ಹಿರಿಮೆ- ಗರಿಮೆಯನ್ನು ವಿಶ್ವಕ್ಕೆ ಸಾರಿರುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಈ ಸಂದರ್ಭದಲ್ಲಿ ರಾಕ್ಷಸ ಗಣವನ್ನು ಪೂಜಿಸುವ ಮಹಿಷ ದಸರಾ ಆಚರಣೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಮೈಸೂರು ನಗರ ಬಿಜೆಪಿ ಎಸ್.ಸಿ.ಮೋರ್ಚಾ ಪದಾಧಿಕಾರಿಗಳು ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್ ಭಾರತೀಯ ಸಂಸ್ಕೃತಿಯಲ್ಲಿ ದೈವೀ ಶಕ್ತಿಯನ್ನು ಪೂಜಿಸುತ್ತೇವೆಯೇ ಹೊರತು ಹಿಂಸೆಯ ಪ್ರತಿರೂಪವಾದ ಮಹಿಷ,ರಾವಣ,ಶೂರ್ಪನಕಿ ಮುಂತಾದ ರಾಕ್ಷಸ ಗಣವನ್ನು ಪೂಜಿಸುವ ಪರಿಪಾಠ ನಮ್ಮಲ್ಲಿ ಬೆಳೆದು ಬಂದಿಲ್ಲ ಎಂದರು.
ಮಹಿಷ ದಸರಾ ಆಚರಣೆಗೆ ದಲಿತ ಸಮುದಾಯವನ್ನು ಎಳೆದು ತರುವುದು ಸಮಂಜಸವಲ್ಲ . ಹಳೇ ಮೈಸೂರು ಭಾಗದಲ್ಲಿ ಯಾವುದೇ ದಲಿತ ಕೇರಿಗೆ ಹೋದರೂ ಚಾಮುಂಡೇಶ್ವರಿ ತಾಯಿಯ ದೇವಾಲಯವಿರುವುದು ಕಂಡು ಬರುತ್ತದೆ. ಪ್ರತಿಯೊಬ್ಬ ದಲಿತರ ಮನೆಗಳಲ್ಲಿ ಮಹಿಷಾಸುರನನ್ನು ವಧೆ ಮಾಡುತ್ತಿರುವ ಚಾಮುಂಡೇಶ್ವರಿಯ ಫೋಟೋಗೆ ಪೂಜಿಸುವುದನ್ನು ಕಾಣುತ್ತೇವೆ. ಹೀಗಿರುವಾಗ ದಲಿತ ಸಮುದಾಯವನ್ನು ದಸರಾ ಆಚರಣೆಗೆ ವಿರೋಧವಿದೆ ಎಂಬ ರೀತಿಯಲ್ಲಿ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹಿಂಸೆಯ ಪ್ರತಿರೂಪವಾದ ಮಹಿಷನನ್ನು ಆರಾಧಿಸುವುದು ಖಂಡನೀಯ.ಅಲ್ಲದೇ ಈ ಸಂಬಂಧ ಡಾ.ಪ್ರೊ.ಮಹೇಶ್ ಚಂದ್ರ ಗುರು ತಮ್ಮ ನಾಮಧೇಯದ ಬಗ್ಗೆ ನೀಡಿರುವ ಸೃಷ್ಟೀಕರಣ ಹಾಸ್ಯಾಸ್ಪದವಾಗಿದೆ ಎಂದು ಕಿಡಿಕಾರಿದ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಪ್ರೊ.ಮಹೇಶ್ ಚಂದ್ರಗುರು ಅವರಿಗೆ ಸಾಮಾನ್ಯ ಕನಿಷ್ಠ ಜ್ಞಾನವೂ ಇಲ್ಲದಿರುವಂತೆ ವರ್ತಿಸುವುದು ಇವರ ಘನತೆಗೆ ಶೋಭೆ ತರುವಂತದಲ್ಲ ಎಂದರು.
ಮಹಿಷ ರಾಜ ಎಂಬುದಕ್ಕೆ ಯಾವುದೇ ಶಾಸನ ಬದ್ದ ಪುರಾವೆಗಳಿಲ್ಲ. ಸಂಶೋಧಿಸಿದ ಅಧ್ಯಯನ ಗ್ರಂಥಗಳಲ್ಲಿ ಇದರ ಉಲ್ಲೇಖವಿಲ್ಲ.ಕವಿ, ಕಾದಂಬರಿಕಾರರು ತಮ್ಮ ಕಪೋಲ ಕಲ್ಪಿತ ರೀತಿಯಲ್ಲಿ ಬರೆದಿರುವ ಒಂದು ವಿಚಾರವನ್ನು ಇಟ್ಟುಕೊಂಡು ಅದೇ ಸತ್ಯ ಎಂದು ಬಿಂಬಿಸಲು ಪ್ರೊ.ಭಗವಾನ್ ಮತ್ತು ಮಹೇಶ್ ಚಂದ್ರಗುರು ಅವರುಗಳು ಪ್ರಯತ್ನಿಸುತ್ತಿರುವುದು ಖಂಡನಾರ್ಹ. ಇನ್ನು ಮುಂದಿನ ದಿನಗಳಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ನರಸಿಂಹ ಮೂರ್ತಿ,ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಧೀರಜ್ ಪ್ರಸಾದ್, ನರಸಿಂಹ ಮೂರ್ತಿ, ಜಯರಾಂ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: