ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ: ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಸೆ.29- ಬೆಂಗಳೂರು ಉಗ್ರರ ಕೇಂದ್ರವಾಗುತ್ತಿದೆ ಎಂದು ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಕೆಲ ಮಂದಿ ಡಿಜೆ ಹಳ್ಳಿ ಘಟನೆ ನಂತರ ಸಿಕ್ಕಿ ಬಿದ್ದಿದ್ದರು. ಹೀಗಾಗಿ ನಮ್ಮ ಟೀಕೆ ಉಗ್ರರ ವಿರುದ್ಧ ಇರಬೇಕು. ಆದರೆ, ಕೋಟ್ಯಂತರ ಜನರಿಗೆ ಅನ್ನ, ಆಶ್ರಯ, ಜೀವನ ನೀಡುತ್ತಿರುವ ತಾಯಿಯಂಥ ಊರಿನ ಬಗ್ಗೆ ಅಲ್ಲ. ಬೆಂಗಳೂರಿನಲ್ಲಿ ಉಗ್ರರು ಸಿಕ್ಕಿಬಿದ್ದ ಮಾತ್ರಕ್ಕೆ ಬೆಂಗಳೂರು ಅವರದ್ದಲ್ಲ. ಬೆಂಗಳೂರು ನಮ್ಮದು ಎಂದಿದ್ದಾರೆ.

ಬೆಂಗಳೂರು ಉಗ್ರರ ಕೇಂದ್ರವಾಗಿದೆ ಎಂಬ ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ. ಇಂಥ ಹೇಳಿಕೆಯನ್ನು ಸಮರ್ಥಿಸಲಾಗದೇ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಕಟ ಅನುಭವಿಸಿದ್ದನ್ನು ನಾನು ಮಾಧ್ಯಮದ ಮೂಲಕ ನೋಡಿದೆ. ಈ ಅಪ್ರಬುದ್ಧ ಹೇಳಿಕೆ ಬಿಜೆಪಿಯ ಹಿರಿಯರಿಗೆ ಮಾಡಿದ ಅಪಮಾನವೂ ಹೌದು ಎಂದು ಹೇಳಿದ್ದಾರೆ.

ಬೆಂಗಳೂರು ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ, ಬೆಂಗಳೂರು 28 ವಿಧಾನಸಭೆ ಕ್ಷೇತ್ರ ಮಾತ್ರವಲ್ಲ, ಬೆಂಗಳೂರು ನಾಲ್ಕು ಲೋಕಸಭೆ ಕ್ಷೇತ್ರ ಮಾತ್ರವಲ್ಲ. ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಮತ ಧ್ರುವೀಕರಣಕ್ಕಾಗಿ ಬೆಂಗಳೂರನ್ನೇ ಅಪಮಾನಿಸುವ ಈ ಕ್ಷುಲ್ಲಕ ಹೇಳಿಕೆ ಅಪರಾಧವೇ ಸರಿ. ಈ ಹೇಳಿಕೆ ಸಂಬಂಧ ಬಿಜೆಪಿ ಸಂಬಂಧಿಸಿದವರಿಂದ ಕ್ಷಮೆ ಕೇಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ ಎಂದು ವ್ಯಂಗ್ಯವಾಡಿದ್ದಾರೆ.

ತೇಜಸ್ವಿ ಸೂರ್ಯ ಅವರು, ಬೆಂಗಳೂರು ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆಯೆಂದು ರಾಜಧಾನಿಯಲ್ಲಿ ಎನ್‌ಐಎ ಕಚೇರಿ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದರು. ರಾಜ್ಯಕ್ಕೆ ಅವಮಾನ ಮಾಡಿದ್ದಾರೆಂದು ರಾಜ್ಯದ ರಾಜಕಾರಣಿಗಳು ತೇಜಸ್ವಿ ವಿರುದ್ಧ ಕಿಡಿಕಾರಿದ್ದರು. (ಎಂ.ಎನ್)

Leave a Reply

comments

Related Articles

error: