ದೇಶಪ್ರಮುಖ ಸುದ್ದಿ

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ಕೋರ್ಟ್ ಹಾಜರಿಗೆ ವಿನಾಯಿತಿ ಕೋರಿದ ಆರೋಪಿಗಳಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ

ಲಖನೌ,(ಉತ್ತರ ಪ್ರದೇಶ),ಸೆ.30- ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅಂತಿಮ ತೀರ್ಪು ಪ್ರಕಟಗೊಳ್ಳಲಿದೆ. ಲಖನೌ ಸಿಬಿಐನ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿದೆ.

ಪ್ರಕರಣದ ಆರೋಪಿಗಳಾದ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಮಂದಿ ತೀರ್ಪು ನೀಡುವ ವೇಳೆ ಕೋರ್ಟ್ ನಲ್ಲಿ ಹಾಜರು ಇರುವಂತೆ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು.

ಆದರೆ ಉಮಾಭಾರತಿ ಹಾಗೂ ಕಲ್ಯಾಣ್ ಸಿಂಗ್ ಗೆ ಕೋವಿಡ್ 19 ಸೋಂಕು ತಗುಲಿರುವುದರಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಇನ್ನು ಎಲ್​.ಕೆ.ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಶಿ ಅವರು ತಮ್ಮ ವಯಸ್ಸಿನ ಆಧಾರದ ಮೇಲೆ ಕೋರ್ಟ್​ ಹಾಜರಿಯಿಂದ ವಿನಾಯಿತಿ ಕೋರಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ. ಒಟ್ಟು ಆರು ಮಂದಿ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ.

ಇನ್ನು ಇತರ ಆರೋಪಿಗಳಾದ ಸಾಧ್ವಿ ರಿತಂಬರ್​, ಸಾಕ್ಷಿ ಮಹಾರಾಜ್ ಮತ್ತು ಚಂಪತ್ ರಾಯ್ ಬನ್ಸಾಲ್ ಸೇರಿದಂತೆ 26 ಮಂದಿ ಆರೋಪಿಗಳು ಕೋರ್ಟ್​ ತಲುಪಿದ್ದಾರೆ. ಆರೋಪಿಗಳು ತಮ್ಮ ಹೆಸರಿನ ಮುಂದೆ ಟಿಕ್​ ಮಾಡಿ ಕೋರ್ಟ್​ ಪ್ರವೇಶಿಸಿದ್ದಾರೆ.

ಕಾನೂನು ತಜ್ಞರ ಪ್ರಕಾರ, ಅಪರಾಧ ಸಾಬೀತಾದರೆ, ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಭರ, ಮಹಂತ್ ಗೋಪಾಲ್ ದಾಸ್, ಚಂಪತ್ ರಾಯ್ ಬನ್ಸಾಲ್, ರಾಮ್ ವಿಲಾಸ್ ವೇದಾಂತಿ, ಧರ್ಮದಾಸ್ ಮತ್ತು ಸತೀಶ್ ಪ್ರಧಾನ್ ಅವರಿಗೆ ಐದು ವರ್ಷಗಳವರೆಗೆ ಗರಿಷ್ಠ ಜೈಲು ಶಿಕ್ಷೆ, ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತು ಆ ವೇಳೆ ಅಯೋಧ್ಯೆ ಜಿಲ್ಲಾಧಿಕಾರಿಯಾಗಿದ್ದ ಆರ್.ಎನ್. ಶ್ರೀವಾಸ್ತವ ಅವರಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಡಿ ಇದೆ.

ಏನಿದು ಪ್ರಕರಣ? 1992ರ ಡಿಸೆಂಬರ್‌ 6. ಅಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ನಿರ್ಮಿತ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದರು. ದೇಶಾದ್ಯಂತ ಕೋಮು ಸಂಘರ್ಷ ಭುಗಿಲೆದ್ದಿತ್ತು.

ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಅಂದರೆ 1990ರಲ್ಲಿ ಗೋಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್​ಶೀಟ್​ನಲ್ಲಿ ಹೇಳಿದೆ.

ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (ಸೆಕ್ಷನ್ 153 ಎ), ರಾಷ್ಟ್ರೀಯ ಏಕೀಕರಣದ ಮೇಲೆ ಪರಿಣಾಮ ಬೀರುವ ಹೇಳಿಕೆಗಳನ್ನು ನೀಡುವುದು (ಸೆಕ್ಷನ್ 153 ಬಿ) ಅಥವಾ ಸಾರ್ವಜನಿಕ ಕಿಡಿಗೇಡಿತನಕ್ಕೆ (ಸೆಕ್ಷನ್ 505) ಸೇರಿದಂತೆ ಭಾರತೀಯ ಅಪರಾಧ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಅಪರಾಧಗಳಿಗೆ ಅವರ ಮೇಲೆ ಆರೋಪ ಹೊರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 351 ಸಾಕ್ಷಿದಾರರು ಹಾಗೂ 600 ಸಾಕ್ಷ್ಯಗಳನ್ನು ಸಿಬಿಐ ಇದಾಗಲೇ ಕೋರ್ಟ್​ ಮುಂದೆ ಹಾಜರುಪಡಿಸಿದೆ. ಸೆ.1ರಂದೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು ಇಂದು ತೀರ್ಪು ಪ್ರಕಟವಾಗಲಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: