ಮೈಸೂರು

ಅಶುಚಿತ್ವದಿಂದ ಕೂಡಿರುವ ನೇರಂಬಳ್ಳಿ ಹೋಟೆಲ್ಸ್ ಪ್ರೈ.ಲಿ.ನ ಶ್ರೀ ಗುರು ರೆಸಿಡೆನ್ಸಿ ಹೋಟೆಲ್ ಬಂದ್ ಮಾಡಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.30:- ನೇರಂಬಳ್ಳಿ ಹೋಟೆಲ್ಸ್ ಪ್ರೈ.ಲಿ.ನ ಶ್ರೀ ಗುರು ರೆಸಿಡೆನ್ಸಿ ಹೋಟೆಲ್ ನಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ರೋಗ ನೀಡುವ ಈ ಹೋಟೆಲ್ ನ್ನು ಬಂದ್ ಮಾಡುವಂತೆ ಒತ್ತಾಯಿಸಿ ಭಾರತ ಪ್ರಜಾ ಸೇನಾ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಈ ಹೋಟೆಲ್ ನಲ್ಲಿ ಬಾತ್ ರೂಂಗಳಿಗೆ ಸರಿಯಾಗಿ ಚಿಲಕವಿಲ್ಲ, ಟೀ ಆರ್ಡರ್ ಮಾಡಿದರೆ ಔಷಧ ಸಿಂಪಡಿಸಿ ಸತ್ತಿದ್ದ ಜಿರಳೆ ಟೀ ಯಲ್ಲಿ ಕಂಡು ಬಂದಿದೆ. ತೋರಿಸಿದರೂ ಕೂಡ ಬೇಜವಾಬ್ದಾರಿ ತನದಿಂದ ಅಲ್ಲಿನ ಸಿಬ್ಬಂದಿಗಳು ವರ್ತಿಸಿದ್ದಾರೆ. ಹೋಟೆಲ್ ಆಡಳಿತ ಮಂಡಳಿಯ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತೆ ಕುರಿತು ಮನಪಾ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಹೇಳಿಕೊಂಡಾಗ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅಂಕಿತಾಧಿಕಾರಿ ಡಾ.ಪ್ರಸಾದ್ ಅವರನ್ನು ಕಳುಹಿಸಿಕೊಟ್ಟಿದ್ದು ಅವರು ಪರಿಶೀಲಿಸಲಾಗಿ ಅಶುಚಿತ್ವದಿಂದ ಕೂಡಿರುವುದು ಗಮನಕ್ಕೆ ಬಂದಿದ್ದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೋವಿಡ್-19 ನಿಂದ ತತ್ತರಿಸಿರುವ ಸಾರ್ವಜನಿಕರು ಇಂತಹ ಹೋಟೆಲ್ ನ ಅವ್ಯವಸ್ಥೆ ಮತ್ತು ಅಶುಚಿತ್ವದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ. ಅನುಪಯುಕ್ತ ಸೊಪ್ಪು, ತರಕಾರಿಗಳಿಂದ ಆಹಾರ ತಯಾರಿಸಿ ಸಾರ್ವಜನಿಕರಿಗೆ ದಿನನಿತ್ಯ ಊಟ ನೀಡುತ್ತಿರುವ ಹೋಟೆಲ್ ನವರು ಹಣಸಂಪಾದನೆಯೊಂದನ್ನೇ ಮಾನದಂಡವಾಗಿಟ್ಟುಕೊಂಡು ಸಾರ್ವಜನಿಕರ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ. ಆದ ಕಾರಣ ಹೋಟೆಲ್ ಸಾರ್ವಜನಿಕರಿಗೆ ರೋಗ ಹೊತ್ತು ತರುವ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಈ ಹೋಟೆಲ್ ಬಂದ್ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕೆ.ಎಂ.ಮಹದೇವಯ್ಯ, ಜಾರ್ಜ್ ಸ್ಯಾಮ್ ಸನ್, ಎಡತೊರೆ ಎಂ.ನಿಂಗರಾಜು, ಕೃಷ್ಣೇಗೌಡ, ಅಲಿ ಅಹ್ಮದ್, ಮಂಜುನಾಥ್ , ಗಿರಿಧರ್, ಹರಿಹರನ್, ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: