ಮೈಸೂರು

ಲಾರಿ ಮುಷ್ಕರ ಹಿನ್ನೆಲೆ : ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು : ಡಿ.ರಂದೀಪ್

ಕಳೆದ ಒಂದು ವಾರದ ನಡೆಸಲಾಗುತ್ತಿರುವ ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಂದೀಪ್ ಡಿ. ಅವರು ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ವಿವಿಧ ಬೇಡಿಕೆಗಳ ಈಡೇರಿಕಾರಿಗೆ ಮಾರ್ಚ್ 30 ರಿಂದ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು.

ಮೈಸೂರು ಜಿಲ್ಲೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕಾರಿಗಳು, ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಸಣ್ಣ ಪುಟ್ಟ ಸಮಸ್ಯೆ ಹೊರತು ಪಡಿಸಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಗೆ ಸ್ವಲ್ಪ ಪ್ರಮಾಣದ ಸಮಸ್ಯೆಯಾಗಬಹುದು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದರು.

ಹಣ್ಣು ಮತ್ತು ತರಕಾರಿಗಳು ಸಣ್ಣ ವಾಹನಗಳಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿದೆ. ಇದರಿಂದ ಅಂತಹ ಸಮಸ್ಯೆಯಾಗಿಲ್ಲ. ಕೆಲವು ಅತ್ಯವಶ್ಯಕ ಪದಾರ್ಥಗಳ ಬೆಲೆಯಲ್ಲಿ ಆತಂಕಪಡುವಷ್ಟು ಏರಿಕೆಯಾಗಿಲ್ಲ ಎಂದು ಎ.ಪಿ.ಎಂ.ಸಿ. ಅಧಿಕಾರಿಗಳು ತಿಳಿಸಿದರು.

ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿರುವ ಟ್ರಕ್ ವಾಹನಗಳ ಬಗ್ಗೆ ವಿವರ ಪಡೆದ ಜಿಲ್ಲಾಧಿಕಾರಿಗಳು, ಯಾವುದೇ ಕ್ಷಣದಲ್ಲಿ ಅಗತ್ಯ ಕಂಡು ಬಂದರೆ ಅವುಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಸಹಾಯವಾಣಿ ಸ್ಥಾಪನೆ:  ಲಾರಿ ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆಗಳೇನಾದರೂ ಉಂಟಾದರೆ ದೂರವಾಣಿ ಸಹಾಯವಾಣಿಯನ್ನು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿದ್ದು, ಕರೆ ಮಾಡಿ ತಿಳಿಸಬಹುದು ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತರಾದ ಸಿ.ಟಿ. ಮೂರ್ತಿ ಅವರು ತಿಳಿಸಿದರು.

ಸಹಾಯವಾಣಿ ಸಂಖ್ಯೆ: 0821-2330364, 0821-2423800, ಬೆಂಗಳೂರಿನ ನಿಯಂತ್ರಣ ಕೊಠಡಿ ಸಂಖ್ಯೆ: 080- 22225805, 080-22213785, ಫ್ಯಾಕ್ಸ್ ಸಂಖ್ಯೆ: 080-22272461ಇದೆ ಎಂದು ಅವರು ತಿಳಿಸಿದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: