ಮೈಸೂರು

ಅಪರೂಪದಲ್ಲಿಯೇ ಅಪರೂಪ : ಮೈಸೂರು ವಿವಿಯ ನೂರನೇ ವರ್ಷದ ಘಟಿಕೋತ್ಸವದಲ್ಲಿ ಪಿಹೆಚ್ ಡಿ ಪದವಿ ಪಡೆಯಲಿದ್ದಾರೆ ತಂದೆ-ಮಗ !

ಮೈಸೂರು,ಸೆ.30:- ಮೈಸೂರು ವಿವಿಯು ನೂರನೇ ವರ್ಷದ ಘಟಿಕೋತ್ಸವದ ಸಂಭ್ರಮದಲ್ಲಿದೆ. ವಿಶೇಷ ಎನ್ನುವಂತೆ ತಂದೆ,ಮಗ ಇಬ್ಬರು ಒಟ್ಟಿಗೆ ಪಿಎಚ್.ಡಿ ಪದವಿ ಮುಕ್ತಾಯಗೊಳಿಸಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪಡೆಯಲು ಸಿದ್ಧರಾಗಿದ್ದಾರೆ.
ಮಕ್ಕಳು ಅನುಕರಣೆ ಮಾಡುವುದು ಸಾಮಾನ್ಯ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪುತ್ರ ಓದುವುದನ್ನು ಕಂಡು ತಾವು ಅದರಿಂದ ಸ್ಪೂರ್ತಿ ಪಡೆದು ಪುತ್ರನೊಂದಿಗೆ ತಂದೆ ಎಂಬಿಎ ಪದವಿ ಪಡೆಯುವ ಜತೆಗೆ ಪಿಎಚ್‌.ಡಿ ಪದವಿಯನ್ನೂ ಪೂರೈಸಿರುವುದು ಅಚ್ಚರಿ ಮೂಡಿಸಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ನಾಗಕೃಷ್ಣ ರಾಜೆ ಅರಸ್‌ (63) ಹಾಗೂ ಪ್ರಮು ಕುಮಾರ್‌ ರಾಜೇ ಅರಸ್‌ ಎಂ.ಎನ್‌. (35 ) ಒಟ್ಟಿಗೆ ಪಿಎಚ್‌.ಡಿ ಪೂರೈಸಿರುವ ತಂದೆ-ಮಗ. ಇವರಿಬ್ಬರಿಗೂ ಮ್ಯಾನೇಜ್‌ಮೆಂಟ್‌ (ಆಡಳಿತ) ವಿಷಯದಲ್ಲಿ ಡಾ.ವಿ.ಎಸ್‌.ಸೋಮನಾಥ್‌ ಮಾರ್ಗದರ್ಶನದಲ್ಲಿ ಪಿಹೆಚ್ ಡಿ ಮಾಡಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇಬ್ಬರಿಗೂ ಪಿಎಚ್‌.ಡಿ ಪದವಿ ಲಭ್ಯವಾಗಲಿದೆ. ತಂದೆ, ಮಗ ಬೇರೆ ಬೇರೆ ವಿಷಯದಲ್ಲಿ ಮಂಡಿಸಿದ ಪಿಎಚ್‌.ಡಿ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿದೆ. ಅಕ್ಟೋಬರ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇಬ್ಬರೂ ಪಿಎಚ್‌.ಡಿ ಅವಾರ್ಡ್‌ ತೆಗೆದುಕೊಳ್ಳುವ ಅಪರೂಪದ ದೃಶ್ಯಕ್ಕೆ ಮೈವಿವಿ ಸಾಕ್ಷಿಯಾಗಲಿದೆ. ವಿಶೇಷವೆಂದರೆ ತಂದೆ ಎಂಎಸ್ಸಿ ಹಾಗೂ ಮಗ ಎಂಬಿಎ ಓದುವಾಗ ಚಿನ್ನದ ಪದಕ ಪಡೆದಿದ್ದಾರೆ.
ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ
ಒಂದೇ ವಿಶ್ವವಿದ್ಯಾಲಯದಲ್ಲಿ ತಂದೆ-ಮಗ ಇಬ್ಬರೂ ಪಿಎಚ್‌.ಡಿ ಪೂರೈಸಿರುವುದು ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ ಎನ್ನಬಹುದು. ನಾಗಕೃಷ್ಣ ರಾಜೇ ಅರಸ್‌ ತಮ್ಮ ಅನುಭವ ಮೇಲೆ ಪಿಎಚ್‌.ಡಿ ಮಾಡಿದರು. ಮಗ ಪ್ರಚಲಿತ ವಿದ್ಯಮಾನವನ್ನು ಪ್ರಬಂಧದ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಇಬ್ಬರೂ ಬುದ್ಧಿವಂತರು. ನನ್ನ ವೃತ್ತಿ ಜೀವನದಲ್ಲಿ ಇದು ಸಂತೋಷದ ಸಂಗತಿ ಎಂದು ಡಾ.ವಿ.ಎಸ್‌.ಸೋಮನಾಥ್‌ ಸಂತೋಷವ್ಯಕ್ತಪಡಿಸಿದ್ದಾರೆ.
ನಾಗಕೃಷ್ಣ ರಾಜೆ ಅರಸ್‌ ಅವರು 1980ರಲ್ಲೇ ಎಂಎಸ್ಸಿ ಪೂರೈಸಿದ್ದರು. ನಂತರ ಕರ್ನಾಟಕ ಸೋಫ್ಸ್‌ ಮತ್ತು ಡಿಟರ್ಜೆಂಚ್‌ ಲಿಮಿಟೆಡ್‌ಗೆ ಕೆಲಸಕ್ಕೆ ಸೇರಿಕೊಂಡು 2017ರ ನವೆಂಬರ್‌ನಲ್ಲಿ ನಿವೃತ್ತರಾದರು. ಆರ್ಥಿಕ ಕಾರಣಕ್ಕೆ ಮುಂದೆ ಉನ್ನತ ಶಿಕ್ಷಣ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ದೂರ ಶಿಕ್ಷಣದ ಮೂಲಕ ಎಂಬಿಎ ಪ್ರವೇಶ ಪಡೆದರು. 2015ರಲ್ಲಿ ಮೈಸೂರು ವಿವಿ ವತಿಯಿಂದ ನಡೆದ ಪಿಎಚ್‌.ಡಿ ಸಾಮಾನ್ಯ ಪರೀಕ್ಷೆಯನ್ನು ಎದುರಿಸಿ ಪಾಸಾದರು. ನಂತರ ಐದು ವರ್ಷ ಸಂಶೋಧನೆ ನಡೆಸಿ, ಇದೀಗ ಪಿಎಚ್‌.ಡಿ ಪ್ರಬಂಧ ಮಂಡಿಸಿದ್ದು, ವಿವಿ ಅದನ್ನು ಅಂಗೀಕರಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: