ಪ್ರಮುಖ ಸುದ್ದಿಮೈಸೂರು

ರಾಜ್ಯದಲ್ಲಿ ಜನರ ತೆರಿಗೆ ಹಣ ಲೂಟಿಯಾಗುತ್ತಿದೆ : ಯಡಿಯೂರಪ್ಪ ಆರೋಪ

ರಾಜ್ಯದಲ್ಲಿ ಜನರ ತೆರಿಗೆಯ ಹಣ ಲೂಟಿಯಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಹಣ ಲೂಟಿಯಾಗುತ್ತಿದ್ದು ಹಾಗೆ ದೋಚಿದ ಹಣವನ್ನು ತಂದು ಉಪ ಚುನಾವಣೆಗಳಲ್ಲಿ ಸುರಿಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಗಂಭೀರ ಆರೋಪ ಮಾಡಿದರು.

ನಂಜನಗೂಡಿನ ಅಶೋಕಪುರಂನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್‍ನವರು ಚುನಾವಣೆಯಲ್ಲಿ ಹಣ ಸುರಿಯುತ್ತಿದ್ದರೂ ಸಹ ಇಲ್ಲಿನ ಜನರು ಅದಕ್ಕೆ ಸ್ಪಂದಿಸುತ್ತಿಲ್ಲ. ಅವರ ಮನದಲ್ಲಿ ಬಿಜೆಪಿ ನೆಲೆಯೂರಿದ್ದು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಅವರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.
ನಂಜನಗೂಡಿನಲ್ಲಿ ಏಪ್ರಿಲ್ 6ರಂದು ಸಂಜೆ ಬಿಜೆಪಿ ಸಮಾವೇಶ ನಡೆಯಲಿದೆ. ನಂಜನಗೂಡು ಉಪಚುನಾವಣೆಯ ಫಲಿತಾಂಶಕ್ಕಾಗಿ ಏಪ್ರಿಲ್ 13ರವರೆಗೆ ಕಾಯಬೇಕಾಗಿಲ್ಲ. ನಾಳೆ ನಡೆಯಲಿರುವ ಸಮಾವೇಶವೇ ಅದಕ್ಕೆ ಉತ್ತರ ನೀಡಲಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೊಡನೆ ರೈತರ ಸಾಲ ಮನ್ನಾ ಮಾಡಿತು. ಅದನ್ನು ಅಲ್ಲಿನ ರಾಜ್ಯ ಸರ್ಕಾರವೇ ಮಾಡಿತೇ ಹೊರತು ಕೇಂದ್ರ ಸರ್ಕಾರದ ನೆರವು ಕೇಳಲಿಲ್ಲ. ಆದರೆ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸಾಲ ಮನ್ನಾ ಮಾಡಲು ಕೇಂದ್ರ ನೆರವಾಗುತ್ತಿಲ್ಲ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ. ಈಗಲೂ ಸಹ ರಾಜ್ಯದ ರೈತರು ಸಹಕಾರ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಡಾ.ಬಾಬು ಜಗಜೀವನರಾಂ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಮುಂದಾದಾಗ ಕಾಂಗ್ರೆಸ್ ಅದಕ್ಕೆ ಬೆಂಬಲ ನೀಡಲಿಲ್ಲ. ಅದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೂ ಸಹ ಕಾಂಗ್ರೆಸ್ ದಾರಿ ತಪ್ಪಿಸಿತು. ಕಾಂಗ್ರೆಸ್‍ನ ಚರಿತ್ರೆ ಹೀಗಿರುವಾಗ ಬಾಬಾ ಸಾಹೇಬರ ಮತ್ತು ಬಾಬೂಜಿಯವರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ಅವರು ಸೋಲಿನ ಭೀತಿಯಿಂದ ಕಂಗೆಟ್ಟಿದ್ದಾರೆ. ಹಾಗಾಗಿ ಅವರ ಮುಖದಲ್ಲಿ ನಗುವೇ ಇಲ್ಲ ಎಂದು ಸಿದ್ಧರಾಮಯ್ಯ ಹೇಳಿರುವ ಕುರಿತು ಪ್ರಶ್ನಿಸಿದಾಗ ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ ಯಾರ್ರೀ ಅವರು? ಸಿದ್ದರಾಮಯ್ಯ ತಲೆಕೆಟ್ಟು ಏನೇನೋ ಮಾತನಾಡುತ್ತಾ ಇದ್ದಾರೆ. ನನಗೆ ಸೋಲಿನ ಭೀತಿಯೂ ಇಲ್ಲ, ಸೋಲಿನ ಬಗ್ಗೆ ನಾನು ಯೋಚಿಸಿಯೂ ಇಲ್ಲ. ಸಿದ್ಧರಾಮಯ್ಯ ರಸ್ತೆಗಳಲ್ಲಿ ಬಿಸಿಲಲ್ಲಿ ಓಡಾಡುತ್ತಿದ್ದಾರೆ. ಆದರೆ ಜನರು ಸೇರುತ್ತಿಲ್ಲ. ಇದರಿಂದಾಗಿ ಕಂಗೆಟ್ಟ ಅವರ ಮುಖ ಬಾಡಿದೆಯೇ ಹೊರತು ನನ್ನ ಮುಖವಲ್ಲ. ಒಣಗಿದ ಮುಖ ಯಾರದ್ದು ಎಂಬುದು ಏಪ್ರಿಲ್ 13ರಂದು ಗೊತ್ತಾಗುತ್ತದೆ ಎಂದರು.  (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: