
ದೇಶಪ್ರಮುಖ ಸುದ್ದಿ
ಹತ್ರಾಸ್ ದಲಿತ ಯುವತಿಯ ಮೇಲಿನ ಅತ್ಯಾಚಾರವನ್ನು ಆಸ್ಪತ್ರೆ ವರದಿ ಖಚಿತಪಡಿಸಿಲ್ಲ: ಎಸ್ಪಿ ವಿಕ್ರಾಂತ್ ವೀರ್
ಹತ್ರಾಸ್,(ಉತ್ತರಪ್ರದೇಶ),ಅ.1-ಹತ್ರಾಸ್ ನಲ್ಲಿ ದಲಿತ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆಗೊಳಗಾಗಿ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ. ಆದರೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆಸ್ಪತ್ರೆಯ ವರದಿಯಲ್ಲಿ ಖಚಿತಪಡಿಸಿಲ್ಲ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಕ್ರಾಂತ್ ವೀರ್, ನಾಲ್ವರು ಮೇಲ್ಜಾತಿಯ ಯುವಕರಿಂದ ಹಲ್ಲೆಗೊಳಗಾಗಿ ಮೃತಪಟ್ಟಿರುವ ಹತ್ರಾಸ್ ನ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ಆಲಿಘಡ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಖಚಿತಪಡಿಸಿಲ್ಲ ಎಂದಿದ್ದಾರೆ.
ಯುವತಿಗೆ ಗಾಯಗಳಾಗಿರುವ ಬಗ್ಗೆ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಬಲವಂತದ ಲೈಂಗಿಕ ಕಿರುಕುಳದ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಾಗಿ ಕಾಯುತ್ತಿದ್ದೇವೆ. ವೈದ್ಯರು ಕೂಡಾ ಅತ್ಯಾಚಾರದ ಬಗ್ಗೆ ಖಚಿತಪಡಿಸಿಲ್ಲ ಎಂದು ಅವರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಯುವತಿಗೆ ಮೊದಲಿಗೆ ಆಲಿಘಡ ಮುಸ್ಲಿಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶೇಷ ತನಿಖಾ ತಂಡವನ್ನು ರಚಿಸಿದ್ದು,ಆ ತಂಡ ನಿನ್ನೆ ಸಂತ್ರಸ್ಥೆಯ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದೆ. ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ಹತ್ರಾಸ್ ಗಡಿ ಭಾಗವನ್ನು ಮುಚ್ಚಲಾಗಿದ್ದು, ಜಿಲ್ಲೆಯಲ್ಲಿ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹತ್ರಾಸ್ ನಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಮಾಧ್ಯಮಗಳಿಗೂ ಕೂಡಾ ಅವಕಾಶ ನಿರಾಕರಿಸಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್, ಎಂ.ಎನ್)