ಮೈಸೂರು

ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಮೈಸೂರು,ಅ.1:- ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ತಕ್ಷಣವೇ ಅಲ್ಲಿನ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ, ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪುರಭವನದ ಎದುರು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಯುಪಿಯಲ್ಲಿ ದಿನನಿತ್ಯ ಅಹಿಂದ ವರ್ಗದವರ ಮೇಲೆ ಹಲ್ಲೆ, ದೌರ್ಜನ್ಯ,ಅತ್ಯಾಚಾರ, ಕೊಲೆಗಳು ಸರ್ವೇ ಸಾಮಾನ್ಯವಾಗಿದೆ. ಶಾಸಕ, ಸಂಸದರುಗಳಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಮತ್ತವರ ಕುಟುಂಬದವರನ್ನು ಹಲ್ಲೆ ಮಾಡಿ ಕೊಲೆ ಮಾಡುವುದು ಯಾರ ಭಯವಿಲ್ಲದೆ ಸಾಗುತ್ತಿದೆ. ಶೀಘ್ರವಾಗಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಅವರ ಕುಟುಂಬದವರಿಗೆ ನೀಡಿರುವ ಎಲ್ಲಾ ರೀತಿಯ ನಾಗರಿಕ ಹಕ್ಕುಗಳನ್ನು ಹಿಂಪಡೆದು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅತ್ಯಾಚಾರಗಳನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಿರ್ಭಯಾಳ ಪ್ರಕರಣದಂತೆ ಈಯುವತಿಯ ಕುಟುಂಬಕ್ಕೂ 5ಕೋಟಿ ರೂ.ಪರಿಹಾರ ನೀಡಬೇಕು. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ತಕ್ಷಣವೇ ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು. ಆಡಳಿತಾತ್ಮಕವಾಗಿ ವಿಫಲವಾಗಿರುವ ಉತ್ತರಪ್ರದೇಶ ಸರ್ಕಾರವನ್ನು ಮೂರು ವಿಭಾಗಗಳಾಗಿ ವಿಂಗಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಉಮಾ ಮಹದೇವ್, ಯಡದೊರೆ ಮಹದೇವಯ್ಯ, ಸಣ್ಣಯ್ಯ ಲಕ್ಕೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: