ಕ್ರೀಡೆ

ಹೈದ್ರಾಬಾದ್ ಸನ್ ರೈಸರ್ಸ್ ಗೆ ಗೆಲುವು

ಹೈದರಾಬಾದ್: ಐಪಿಎಲ್ 10ನೇ ಆವೃತ್ತಿಯ ಮೊದಲ ಪಂದ್ಯವನ್ನು ಹೈದ್ರಾಬಾದ್ ಸನ್ ರೈಸರ್ಸ್, ಬೆಂಗಳೂರು ವಿರುದ್ಧ 35 ರನ್ ಗಳಿಂದ ಗೆದ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

208ರನ್‍ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಆರ್‍ಸಿಬಿ ಅಂತಿಮವಾಗಿ 19.4 ಓವರ್ ಗಳಲ್ಲಿ 172 ರನ್‍ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಕ್ರಿಸ್ ಗೇಲ್ ಮತ್ತು ಮನ್‍ದೀಪ್ ಸಿಂಗ್ ಮೊದಲ ವಿಕೆಟ್‍ಗೆ 5.4 ಓವರ್‍ಗಳಲ್ಲಿ 52 ರನ್ ಜೊತೆಯಾಟವಾಡಿದ್ದರೂ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ಮೊದಲ ಪಂದ್ಯದಲ್ಲಿ ಆರ್‍ಸಿಬಿ ಸೋಲನ್ನು ಅನುಭವಿಸಿದೆ.ವಿಂಡೀಸಿನ ಕ್ರೀಸ್ ಗೇಲ್ 32 ರನ್( 21 ಎಸೆತ, 2 ಬೌಂಡರಿ, 3 ಸಿಕ್ಸರ್) ಮನ್‍ದೀಪ್ ಸಿಂಗ್ 24 ರನ್, ಟ್ರಾವಿಸ್ ಹೆಡ್ 30 ರನ್, ಕೇದಾರ್ ಜಾದವ್ 31 ರನ್( 16 ಎಸೆತ, 4 ಬೌಂಡರಿ, 1 ಸಿಕ್ಸರ್), ಸಚಿನ್ ಬೆಬಿ 1 ರನ್, ಶೇನ್ ವಾಟ್ಸನ್ 22 ರನ್‍ಗಳಿಸಿ ಗಳಿಸಿ ಔಟಾದರು.

100ನೇ ವಿಕೆಟ್: ವೇಗದ ಬೌಲರ್ ಆಶಿಶ್ ನೆಹ್ರಾ ಆರ್‍ಸಿಬಿ ನಾಯಕ ವಾಟ್ಸನ್ ವಿಕೆಟ್ ಪಡೆಯುವ ಮೂಲಕ ಐಪಿಎಲ್‍ನಲ್ಲಿ ನೂರನೇ ವಿಕೆಟ್ ಪಡೆದ ಸಾಧನೆ ಮಾಡಿದರು. ನೆಹ್ರಾ ಭುವನೇಶ್ವರ್ ಕುಮಾರ್, ರಶೀದ್ ಖಾನ್ ತಲಾ 2 ವಿಕೆಟ್ ಪಡೆದರೆ ಹೂಡಾ ಮತ್ತು ಬಿಪುಲ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಹೈದ್ರಾಬಾದ್ ಆರಂಭದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡರೂ ಯುವರಾಜ್ ಸಿಂಗ್ ಮತ್ತು ಮಾರ್ಕ್ ಹೆನ್ರಿಕ್ಸ್ ಅವರ ಅರ್ಧಶತಕದಿಂದಾಗಿ 4 ವಿಕೆಟ್ ನಷ್ಟಕ್ಕೆ 207 ರನ್‍ಗಳಿಸಿತ್ತು.

10.3 ಓವರ್‍ಗೆ 93 ರನ್‍ಗಳಿಸಿದ್ದಾಗ ಶಿಖರ್ ಧವನ್ ಔಟಾದರು. ಕ್ರೀಸ್‍ಗೆ ಆಗಮಿಸಿದ ಯುವಿ ಆರಂಭದಲ್ಲಿ ನಿಧಾನವಾಗಿ ಆಡಿದ್ದರೂ ಬರಬರುತ್ತಾ ಭರ್ಜರಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ಹೆನ್ರಿಕ್ಸ್ ಮತ್ತು ಯುವಿ 3ನೇ ವಿಕೆಟ್‍ಗೆ 29 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು. ಹೆನ್ರಿಕ್ಸ್ 52 ರನ್(37 ಎಸೆತ, 7 ಬೌಂಡರಿ, 2 ಸಿಕ್ಸರ್)ಸಿಡಿಸಿ ಔಟಾದರೆ ಯುವಿ 62 ರನ್(27 ಎಸೆತ, 7ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು.ಶಿಖರ್ ಧವನ್ 40 ರನ್(31 ಎಸೆತ, 5 ಬೌಂಡರಿ) ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ 14 ರನ್ ಗಳಿಸಿದರು. ದೀಪಕ್ ಹೂಡಾ 16 ರನ್ ಗಳಿಸಿ ಔಟಾಗದೇ ಉಳಿದರೆ ಕೊನೆಯಲ್ಲಿ ಬೆನ್ ಕಟ್ಟಿಂಗ್ 6 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 16 ರನ್‍ಗಳಿಸಿ ಔಟಾಗದೇ ಉಳಿದರು.ಟೈಮಲ್ ಮಿಲ್ಸ್, ಅಂಕಿತ್ ಚೌಧರಿ, ಚಹಲ್, ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್ ಪಡೆದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: