ಪ್ರಮುಖ ಸುದ್ದಿಮೈಸೂರು

ಅರಮನೆಗೆ ಆಗಮಿಸಿದ ಗಜಪಡೆ : ಗಜಪಡೆಗಳಿಗೆ ಉಸ್ತುವಾರಿ ಸಚಿವರಿಂದ ಪೂಜೆ

ಮೈಸೂರು,ಅ.2:- ಅರಮನೆಯ ಪೂರ್ವದಿಕ್ಕಿನ ಜಯಮಾರ್ತಾಂಡ ಮಹಾದ್ವಾರದಲ್ಲಿ ಕಾಡಿನಿಂದ ನಾಡಿಗೆ ಬಂದ ಗಜಪಡೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಮೇಯರ್ ತಸ್ನಿಂ, ಪಾಲಿಕೆ ಆಯುಕ್ತರಾರ ಗುರುದತ್ತ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಪೊಲೀಸ್ ಇಲಾಖೆ ವತಿಯಿಂದ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಅಲ್ಲಿಂದ ಮಧ್ಯಾಹ್ನ 12.45 ರ ಸುಮಾರಿಗೆ ನಾದಸ್ವರ ಹಾಗೂ ಪೂರ್ಣಕುಂಭದ ಮೂಲಕ ಅರಮನೆಯ ಆನೆ ಬಾಗಿಲಿಗೆ ಗಜೆಪಡೆಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಅಲ್ಲಿ ಗಜಪಡೆಗಳಿಗೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.
ಸಚಿವರಿಂದ ತಾಂಬೂಲ ಹಸ್ತಾಂತರ
ನಾಡಹಬ್ಬ ದಸರಾವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪ್ರಮುಖ ಅಧಿಕಾರಿಗಳಿಗೆ ಫಲತಾಂಬೂಲಗಳನ್ನು ವಿತರಣೆ ಮಾಡಿದರು.
ಮಾವುತರು, ಕಾವಾಡಿಗರಿಗೆ ಮೂಲಭೂತ ಸಾಮಗ್ರಿ ವಿತರಣೆ
ಗಜಪಡೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಾವುತರು ಹಾಗೂ ಕಾವಾಡಿಗರಿಗೆ ಆಹ್ವಾನಿತ ಗಣ್ಯವ್ಯಕ್ತಿಗಳಿಂದ ಮೂಲಭೂತ ಸೌಕರ್ಯಗಳ ವಿತರಣೆ ಮಾಡಲಾಯಿತು.
ಚಾಮುಂಡೇಶ್ವರಿಗೆ ಗೊಂಬೆ ತೊಟ್ಟಿಲ ಪೂಜೆ
ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು, ಬಳಿಕ ಅರಮನೆಯ ಗೊಂಬೆ ತೊಟ್ಟಿಲಿಗೆ ಪೂಜೆ ನೆರವೇರಿಸಿದರು.
ಶಾಂತವಾಗಿ ಸಹಕರಿಸಿದ ಗಜಪಡೆ
ಅಂಬಾರಿ ಆನೆ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳು ಯಾವುದೇ ಅಂಜಿಕೆ ಇಲ್ಲದೆ, ಶಿಸ್ತುಬದ್ಧವಾಗಿ ಪೂಜೆ ಹಾಗೂ ಮೆರವಣಿಗೆಗೆ ಸಹಕರಿಸಿದವು.

ಇದನ್ನೂ ಓದಿ
ಗಜಪಡೆ ಅರಮನೆ ಪ್ರವೇಶಕ್ಕೆ ಕ್ಷಣಗಣನೆ : ಅರಣ್ಯಭವನದಲ್ಲಿ ಗಜಪಡೆಗೆ ಪೂಜೆ

Leave a Reply

comments

Related Articles

error: