ದೇಶಪ್ರಮುಖ ಸುದ್ದಿ

ವಿಶ್ವದ ಅತಿ ಉದ್ದದ ಅಟಲ್​ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಶಿಮ್ಲಾ,ಅ.3-ವಿಶ್ವದಲ್ಲೇ ಅತಿ ಉದ್ದವಾದ ಅಟಲ್​ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆಗೊಳಿಸಿದರು.

ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್ ನ ಅಡಿಯಲ್ಲಿ ನಿರ್ಮಾಣವಾಗಿರುವ 9.02 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ಇದ್ದಾಗಿದ್ದು, ಲೇಹ್​ ಮತ್ತು ಮನಾಲಿ ನಡುವೆ ಸುಮಾರು 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.

ಈ ಕುರಿತು ಜನತೆಗೆ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಗಡಿ ಭದ್ರತಾ ದೃಷ್ಟಿಯಿಂದ ಈ ಸುರಂಗವೂ ಬಹು ದೊಡ್ಡ ಸಂದೇಶವನ್ನು ರವಾನಿಸುತ್ತದೆ. ಈ ಅಭಿವೃದ್ಧಿ ಯೋಜನೆಯ ಉದ್ಘಾಟನೆಗೆ ಬಹುದೊಡ್ಡ ಕಾರ್ಯಕ್ರಮವನ್ನು ನಡೆಸಬೇಕೆಂದು ಬಯಸಿದ್ದೆವು. ಆದರೆ ಕೊರೊನಾ ವೈರಸ್ ನಿಂದಾಗಿ ಚಿಕ್ಕದಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಈ ವೇಳೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾಣೆ ಹಾಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಸುರಂಗ ಉದ್ಘಾಟನೆಗಾಗಿ ವಿಶೇಷ ವಿಮಾನದಲ್ಲಿ ಮನಾಲಿಗೆ ಆಗಮಿಸಿದರು. ಜತೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೂಡ ಇದ್ದರು.

ಈ ಸುರಂಗ ಮಾರ್ಗ ಭಾರತದ ಪಾಲಿಗೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವಪೂರ್ಣವಾಗಿದೆ. ಚಳಿಗಾಲದ ಸಮಯದಲ್ಲಿ ಭಾರತದ ಇತರೆ ಪ್ರದೇಶದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದ ಪ್ರದೇಶಗಳಿಗೆ ಈ ಸುರಂಗ ಮಾರ್ಗ ಸರ್ವ ಋತುವಲ್ಲೂ ಸಂಚಾರ ಸೇವೆ ಕಲ್ಪಿಸಲಿದೆ. ಲಡಾಖ್ ನಲ್ಲಿ ಸೈನಿಕರಿಗೆ ತ್ವರಿತವಾಗಿ ಶಸ್ತ್ರಾಸ್ತ್ರ ಮತ್ತು ಆಹಾರ ಸಾಮಗ್ರಿಯನ್ನು ತಲುಪಿಸಲು ಈ ಸುರಂಗಮಾರ್ಗ ಬಳಕೆಯಾಗಲಿದೆ.

ಸುಮಾರು ಹತ್ತು ಸಾವಿರ ಅಡಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಈ ಮೊದಲಿನ ಅಂದಾಜಿನ ಪ್ರಕಾರ ಆರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಇದೀಗ ಬರೋಬ್ಬರಿ ಹತ್ತು ವರ್ಷಗಳ ನಂತರ ಸುರಂಗ ಮಾರ್ಗ ಪೂರ್ಣಗೊಂಡಿದೆ.

ಅಟಲ್ಸುರಂಗ ಕುರಿತು: ಅಟಲ್​ ಸುರಂಗವನ್ನು ನಿರ್ಮಿಸುವ ತೀರ್ಮಾನವನ್ನು 2000ರ ಜೂನ್​ 3ರಂದು ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡಿದ್ದರು. 2002ರ ಮೇ 26ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು. 2019ರ ಡಿಸೆಂಬರ್​ 25ರಂದು ರೋಹ್ಟಾಂಗ್​ ಸುರಂಗ ಮಾರ್ಗವನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ‘ಅಟಲ್​​ ಸುರಂಗ’ ಎಂದು ಮರುನಾಮಕರಣ ಮಾಡಲಾಯಿತು. ಅಲಟ್​​ ಸುರಂಗವೂ ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿದೆ. ಸುರಂಗವೂ ಸುಮಾರು 9.02 ಕಿ.ಮೀ ಉದ್ದವಿದೆ. ಅಲ್ಟ್ರಾ-ಮಾಡರ್ನ್​ ವಿಶೇಷತೆಗಳಿಂದ ಹಿಮಾಲಯದ ಪಿರ್​ ಪಂಜಲ್​ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ.

ವಿಶ್ವದಲ್ಲೇ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಖ್ಯಾತಿಗೆ ಅಟಲ್​ ಸುರಂಗ ಮಾರ್ಗ ಭಾಜನವಾಗಿದ್ದು, ಇದು ಮನಾಲಿ ಮತ್ತು ಲೇಹ್​ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದ್ದು, ಪ್ರಯಾಣದ ದೂರ 4 ರಿಂದ 5 ಗಂಟೆ ತೆಗೆದುಕೊಳ್ಳಲಿದೆ. ಸುರಂಗವೂ ಕುದರೆ ಲಾಳದ ಆಕಾರದಲ್ಲಿದೆ. ಸಿಂಗಲ್​ ಟ್ಯೂಬ್ ಡಬಲ್ ಲೇನ್ ಸುರಂಗವು 8 ಮೀಟರ್ ರಸ್ತೆ ಮಾರ್ಗವನ್ನು ಹೊಂದಿದೆ ಮತ್ತು 5.525 ಮೀಟರ್ ಓವರ್​ ಹೆಡ್​ ಕ್ಲಿಯರೆನ್ಸ್ ಹೊಂದಿದೆ. ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ದಿನಕ್ಕೆ 3,000 ಕಾರುಗಳು ಮತ್ತು 1,500 ಟ್ರಕ್‌ಗಳ ಸಂಚಾರ ಸಾಂದ್ರತೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಸುರಂಗವೂ 10.5 ಮೀಟರ್​ ಅಗಲವಿದೆ ಮತ್ತು 3.6 X 2.25 ಮೀಟರ್​ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿಯೇ ನಿರ್ಮಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ, ಯಾವುದೇ ತುರ್ತು ಪರಿಸ್ಥಿತಿಗಾಗಿ ಪ್ರತಿ 150 ಮೀಟರ್​ಗೆ ಟೆಲಿಫೋನ್ ಸಂಪರ್ಕ, ಪ್ರತಿ 60 ಮೀಟರ್​ಗೆ ಅಗ್ನಿಶಾಮಕ ಯಾಂತ್ರಿಕ ವ್ಯವಸ್ಥೆ ಮತ್ತು ಸ್ವಯಂ ಘಟನೆ ಪತ್ತೆ ವ್ಯವಸ್ಥೆ ಸೇರಿದಂತೆ ಸುರಂಗದಲ್ಲಿ ವಿವಿಧ ರೀತಿಯ ಭದ್ರತಾ ಸಾಧನಗಳಿವೆ. ಪ್ರತಿ 25 ಮೀಟರ್‌ನಲ್ಲಿ ಸ್ಥಳಾಂತರಿಸುವ ದೀಪಗಳು ಮತ್ತು ನಿರ್ಗಮನ ಚಿಹ್ನೆಗಳು ಮತ್ತು ವಿಸ್ತರಣಾ ವ್ಯವಸ್ಥೆಗಳಿವೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: