ಮೈಸೂರು

ಮೈಸೂರು ಅಭಿವೃದ್ಧಿಗೆ ತೆರಿಗೆ ಕಟ್ಟುವುದು ಅತ್ಯಾವಶ್ಯಕ ;ಆಸ್ತಿ ತೆರಿಗೆ ಪಾವತಿಸಿ ಮೈಸೂರು ಅಭಿವೃದ್ಧಿ ಗೆ ಕೈಜೋಡಿಸಿ : ಶಾಸಕ ಜಿ.ಟಿ.ದೇವೇಗೌಡ ಮನವಿ

"ಪಾಲಿಕೆ ನಡೆ ಜನತೆ ಕಡೆ" ಎಂಬ ವಿನೂತನ ಆನ್ಲೈನ್ ಆಸ್ತಿ ತೆರಿಗೆ ವಸೂಲಾತಿ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಆ.3:- ಯುಜಿಡಿ ಆಗಿಲ್ಲ, ಖಾಲಿ ಸೈಟ್ ಇದೆ, ಮರ ಗಿಡ ಬೆಳೆದಿದೆ, ಸ್ವಚ್ಛತೆ ಇಲ್ಲ, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ, ಮೈಸೂರಿನಂತ ನಗರದಲ್ಲಿದ್ದು ಹೀಗಿದೆಯಾ ಅನ್ನೋ ಭಾವನೆ ಜನರಲ್ಲಿದೆ. ಇದಕ್ಕೆ ಸೂಕ್ತ ಪರಿಹಾರ ತೆರಿಗೆ ಪಾವತಿ. ತೆರಿಗೆ ಪಾವತಿಸಿ, ಮೈಸೂರು ಅಭಿವೃದ್ಧಿಗೆ ತೆರಿಗೆ ಕಟ್ಟುವುದು ಅತ್ಯಾವಶ್ಯಕವಾಗಿದ್ದು ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆ ಪಾವತಿಸಿ ಮೈಸೂರು ಅಭಿವೃದ್ಧಿ ಗೆ ಕೈಜೋಡಿಸಿ ಎಂದು ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.
ಅವರಿಂದು ಮೈಸೂರು ಮಹಾನಗರ ಪಾಲಿಕೆ ಸಂಪನ್ಮೂಲ ಕ್ರೋಢೀಕರಿಸಲು ವಲಯ ಕಚೇರಿ 3 ವಾರ್ಡ್ ನಂಬರ್ 58 ವ್ಯಾಪ್ತಿಯಲ್ಲಿರುವ ಸಾಲುಮರದ ತಿಮ್ಮಕ್ಕನ ಉದ್ಯಾನವನದಲ್ಲಿ “ಪಾಲಿಕೆ ನಡೆ ಜನತೆ ಕಡೆ” ಎಂಬ ವಿನೂತನ ಆನ್ಲೈನ್ ಆಸ್ತಿ ತೆರಿಗೆ ವಸೂಲಾತಿ ಕಾರ್ಯಕ್ರಮವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೈಸೂರು ನಗರದ ಅಭಿವೃದ್ಧಿಗೆ ಪಾಲಿಕೆಯ ಆಸ್ತಿ ತೆರಿಗೆ ಮೂಲ ಆರ್ಥಿಕ ಸಂಪನ್ಮೂಲ ವಾಗಿದ್ದು, ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಪ್ರಕರಣ 108 ರಂತೆ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಆಸ್ತಿ ಮಾಲೀಕರು /ಅನುಭೋಗದಾರರು ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಸ್ವಯಂ ಆಸ್ತಿ ತೆರಿಗೆ ಪದ್ಧತಿ ಆಸ್ತಿ ತೆರಿಗೆ ಪಾವತಿಸಲು ಅಕ್ಟೋಬರ್ 31ರ ವರೆಗೆ ಕಾಲಾವಕಾಶ ನೀಡಲಾಗಿದೆ. ನವೆಂಬರ್ ನಲ್ಲಿ ಪಾವತಿಸುವ ತೆರಿಗೆದಾರರು ನಿಯಮಾನುಸಾರ ದಂಡ ಪಾವತಿಸಬೇಕಾಗುತ್ತದೆ ಎಂದರು.
ಪಾಲಿಕೆ ವಲಯ ಕಚೇರಿ 3 ವ್ಯಾಪ್ತಿಯಲ್ಲಿ ಒಟ್ಟು 29876 ಆಸ್ತಿಗಳಿರುತ್ತವೆ. ಪ್ರಸಕ್ತ 2020- 21 ನೇ ಸಾಲಿಗೆ ಒಟ್ಟು 15.902 ಆಸ್ತಿಗಳಿಂದ 10.25ಕೋಟಿ ರೂ ಹಾಗೂ 2019 -20 ರವರೆಗಿನ 4.127 ಬಾಕಿ ಪ್ರಕರಣಗಳಿಂದ 2.89 ಕೋಟಿ. ಒಟ್ಟು 13. ಕೋಟಿ 75 ಲಕ್ಷ ವಸೂಲಾತಿ ಆಗಿರುತ್ತದೆ. ಬಾಕಿ 13984 ಆಸ್ತಿಗಳಿಂದ (ರೆವಿನ್ಯೂ ಆಸ್ತಿಗಳು ಸೇರಿದಂತೆ) 11ಕೋಟಿ 62ಲಕ್ಷ ರೂ.ವಸೂಲಾತಿ ಬಾಕಿ ಆಗಬೇಕಾಗಿದೆ. ಆಸ್ತಿ ತೆರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ಹಾಗೂ ಸ್ವಚ್ಛ ಭಾರತ ಯೋಜನೆಯಡಿ ಪ್ರಶಂಸಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕಷ್ಟಸಾಧ್ಯವಾಗುತ್ತಿದೆ. ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆಯಿಂದ ನೇರವಾಗಿ ವೇತನ ಪಾವತಿಸಬೇಕಾಗಿದ್ದು, ಆಸ್ತಿತೆರಿಗೆ ಹಣದಲ್ಲಿಯೇ ಪಾವತಿಸಬೇಕಾಗುತ್ತದೆ. ತನ್ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಪಾಲಿಕೆ ವಲಯ ಕಚೇರಿ ಮೂಲದ ವ್ಯಾಪ್ತಿಯಲ್ಲಿ ಒಟ್ಟು 3861 ನಿವೇಶನಗಳು ಇರುತ್ತವೆ. ನಿವೇಶನಗಳ ಕೆಲವು ಮಾಲೀಕರು ಹೊರರಾಜ್ಯದಲ್ಲಿ ನೆಲೆಸಿರುವುದು ಕಂಡುಬಂದಿದ್ದು, ಅವರುಗಳ ಹಾಗೂ ಸರ್ಕಾರಿ ಕೆಲಸದಲ್ಲಿರುವ ಆಸ್ತಿ ಮಾಲೀಕರಿಗೆ ಕಂದಾಯ ಪಾವತಿಸಲು ಅನುಕೂಲವಾಗುವಂತೆ ಮುಂದಿನ ಮೂರು ತಿಂಗಳು ಸಾರ್ವತ್ರಿಕ ರಜಾ ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸಿ ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದನ್ನು ವಲಯ ಕಚೇರಿ 3ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಅಗತ್ಯ ಬ್ಯಾಂಕ್ ಸಿಬ್ಬಂದಿ ಮತ್ತು ಪಾಲಿಕೆ ಕಂದಾಯ ಪರಿಶೀಲಕರು ರಜಾದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ಸಾರ್ವಜನಿಕರು ಕಚೇರಿಗೆ ಬಂದು ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಪ್ರಪ್ರಥಮ ಬಾರಿಗೆ “ಪಾಲಿಕೆಯ ನಡೆ, ಜನತೆಯ ಕಡೆ ಎಂಬ ಅಭಿಯಾನದಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಸ್ತಿತೆರಿಗೆ ಪಾವತಿಸುತ್ತಿರುವ ಮಾಲೀಕರು ಮೈಸೂರು ಮಹಾನಗರದ ಅಭಿವೃದ್ಧಿಗೆ, ಸಹಕರಿಸುತ್ತಿದ್ದು, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅಭಿನಂದನೆ ಅರ್ಪಿಸುವುದಾಗಿ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯು ಕೈಗೊಂಡಿರುವ ಈ ಕಾರ್ಯಕ್ರಮ ಒಳ್ಳೆಯ ಬೆಳವಣಿಗೆ ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಸಹ ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡು ನಗರದ ಅಭಿವೃದ್ಧಿಗೆ ಹಾಗೂ ಸ್ವಚ್ಛ ಭಾರತದ ಪ್ರಶಂಸೆಗೆ ಮೈಸೂರು ನಗರವು ಪಾತ್ರವಾಗಲು ಸಹಕರಿಸಬೇಕೆಂದು ವಿನಂತಿಸಿದರು.
ಮೈಸೂರು ದಸರಾದ ಬಗ್ಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೊವೀಡ್19 ಹಿನ್ನೆಲೆಯಲ್ಲಿ ಸಾರ್ವಜನಿಕರ ರಕ್ಷಣೆ ಅಗತ್ಯವಾಗಿದ್ದು ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಮೂಲಕ ದಸರಾ ಉತ್ಸವದಲ್ಲಿ ಇಂತಿಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಉತ್ತರವಾಗಿ ದಸರಾ ಹಬ್ಬ ಮೂಡಿ ಬರಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.
ಇಂದು ನಡೆದ ಕಂದಾಯ ವಿಶೇಷ ವಸೂಲಿ ಅಭಿಯಾನದಲ್ಲಿ ಕಳೆದ 19 ವರ್ಷಗಳಿಂದ ಬಾಕಿ ಇದ್ದ ಸುಮಾರು ಒಂದು ಲಕ್ಷದ ಐವತ್ತೊಂಭತ್ತು ಸಾವಿರದ ರೂ.ಗಳ ಕಂದಾಯವನ್ನು ಪಾವತಿಸಲಾಗಿದ್ದು, ಅವರಿಗೆ ಶಾಸಕ ಜಿ.ಟಿ.ದೇವೇಗೌಡರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: