ಮೈಸೂರು

ಜೀವನವನ್ನು ಬಲೆಯಾಗಿ ಸ್ವೀಕರಿಸದೇ ಕಲೆಯಾಗಿ ಸ್ವೀಕರಿಸಬೇಕು : ಡಾ.ಸರ್ವಮಂಗಳ ಶಂಕರ್

ಸಂಗೀತ, ಸಾಹಿತ್ಯದಿಂದ ವ್ಯಕ್ತಿತ್ವ ಉದ್ದೀಪನಗೊಂಡು ಜೀವನ ಬೆಳಗುತ್ತದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸರ್ವಮಂಗಳ ಶಂಕರ್ ಅಭಿಪ್ರಾಯಪಟ್ಟರು.

ಗುರುವಾರ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕ್ರೀಡಾ ವೇದಿಕೆಯ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲೆಗಳ ಪರಮ ಉದ್ದೇಶ ಮನುಷ್ಯನಿಗೆ ನೆಮ್ಮದಿ ನೀಡಿ ಸಂತೋಷದಿಂದ ಜೀವನ ನಡೆಸುವಂತೆ ಮಾಡುವುದು. ವಿದ್ಯಾಭ್ಯಾಸ ಜ್ಞಾನಾರ್ಜನೆಗೆ ಒತ್ತು ನೀಡಿ ಬದುಕನ್ನು ಕಟ್ಟಿಕೊಳ್ಳಲು ನೆರವಾದರೆ, ಕಲೆಗಳು ಬದುಕನ್ನು ಸುಂದರವಾಗಿಸಲು ನೆರವಾಗುತ್ತವೆ. ಕಲೆಗಳಲ್ಲಿ ವಿದ್ಯೆಯೂ ಸೇರಿದಂತೆ 64 ವಿಧದ ಪ್ರಕಾರಗಳಿದ್ದು ಅವುಗಳಲ್ಲಿ ಯಾವುದಾದರೊಂದನ್ನು ಮೈಗೂಡಿಸಿಕೊಂಡರೆ ಬಾಳು ಬೆಳಗುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಜೀವನವನ್ನು ಬಲೆಯಾಗಿ ಸ್ವೀಕರಿಸದೆ ಕಲೆಯಾಗಿ ಸ್ವೀಕರಿಸಿದರೆ ಆತ್ಮಹತ್ಯೆಯ ಪ್ರಶ್ನೆಯೇ ಬರುವುದಿಲ್ಲ. ದೇವರು ನಮಗಾಗಿ ಅನೇಕ ಮಾರ್ಗಗಳನ್ನು ಸೃಷ್ಟಿಸಿದ್ದಾನೆ. ಬೇಕಂತಲೇ ಪರೀಕ್ಷೆಗಳನ್ನು ಒಡ್ಡುತ್ತಾನೆ. ಅದರಲ್ಲಿ ನಮಗೆ ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು, ಆತ್ಮವಿಶ್ವಾಸದಿಂದ ಧನಾತ್ಮಕ ಅಂಶಗಳನ್ನು ಮಾತ್ರ ಸ್ವೀಕರಿಸುತ್ತ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆಲ್ಲಾ ಇಚ್ಛಾಶಕ್ತಿ, ಕ್ರಿಯಾಶಕ್ತಿಯೊಂದಿಗೆ ಧೀಶಕ್ತಿಯೂ ಬೇಕು ಎಂದು ಹೇಳಿದರು.

ಇದೇ ವೇಳೆ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ, ಕಬಡ್ಡಿ ಮತ್ತು ಸಾಫ್ಟ್ ಬಾಲ್ ಆಟಗಾರ್ತಿ ಎನ್.ಗೀತಾ, ಕಾಲೇಜಿನ ಪ್ರಾಂಶುಪಾಲ ಕೆ.ವಿ.ಸುರೇಶ್, ಶೈಕ್ಷಣಿಕ ಡೀನ್ ಡಾ.ಹೆಚ್.ಬಿ.ಸುರೇಶ್, ಕ್ರೀಡಾ ವಿಭಾಗದ ಮುಖ್ಯಸ್ಥ ಹುಚಗೊಂಡರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: