ಮೈಸೂರು

ಗಾಂಧೀಜಿ ಪುತ್ಥಳಿಗೆ ಮಾಸ್ಕ್ ಹಾಕುವ ಮೂಲಕ ಕೊರೋನ ಜಾಗೃತಿ

ಮೈಸೂರು,ಅ.5:- ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ವತಿಯಿಂದ ನಗರದ ನ್ಯಾಯಾಲಯದ ಮುಂಭಾಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಸ್ಕ್ ಹಾಕುವ ಮೂಲಕ “ಮಾಸ್ಕ್ ಹಾಕೋಣ ಕೊರೋನ ನಿಯಂತ್ರಿಸೋಣ” ಕಾರ್ಯಕ್ರಮದಡಿ ನಾಗರೀಕರಲ್ಲಿ ಕೊರೋನ ಕುರಿತು ಜಾಗೃತಿ ಮೂಡಿಸಲಾಯಿತು.
ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ ಕೇಂದ್ರ ಸರ್ಕಾರ ಕೊರೋನ ನಿಯಂತ್ರಿಸಲು ಲಾಕ್ ಡೌನ್, ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರದ ಕಠಿಣ ಕ್ರಮ ತೆಗೆದುಕೊಂಡರೂ ಸಹ ನಾಗರೀಕರೂ ವೈಜ್ಞಾನಿಕವಾಗಿ ಪೂರ್ಣಪ್ರಮಾಣದಲ್ಲಿ ಪರಿಪಾಲಿಸದ ಕಾರಣ ಕೊರೋನ ಸೋಂಕು ದಿನೇದಿನೇ ಹೆಚ್ಚುತ್ತಿದೆ. ಹಾಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಂದೇಶ ತತ್ವಗಳು ನಮ್ಮ ದೇಶಕ್ಕೆ ಮಾದರಿಯಾಗಿದ್ದು ಮಹಾತ್ಮ ಗಾಂಧಿ ಪುತ್ಥಳಿಗೆ ಮಾಸ್ಕ್ ತೊಡಿಸುವ ಮೂಲಕ ಆರೋಗ್ಯ ಸ್ವಚ್ಛ ಭಾರತಕ್ಕಾಗಿ ಮಾಸ್ಕ್ ಹಾಕುವ ಮೂಲಕ ನಾವೆಲ್ಲರೂ ಕಡ್ಡಾಯವಾಗಿ ಪಾಲಿಸೋಣ. ನಾಡಹಬ್ಬ ದಸರಾ ಆಹ್ವಾನ ಮಾಹಿತಿ, ಹೋರ್ಡಿಂಗ್ ಬೋರ್ಡ್ ಸೇರಿದಂತೆ ಸರ್ಕಾರಿ ಯೋಜನೆ ಕಾರ್ಯಕ್ರಮಗಳ ಪ್ರಕಟಣೆಗಳಲ್ಲಿ ಮಂತ್ರಿಗಳು ಮತ್ತು ಜನಪ್ರತಿನಿಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರುವ ಪೋಟೋಗಳು ಸರ್ಕಾರ ಪ್ರಕಟಿಸಲು ಮುಂದಾಗಬೇಕು, ಮೈಸೂರು ನಗರದಲ್ಲಿ ಮಾಸ್ಕ್ ಹಾಕಿರುವವರಿಗೆ ಮಾತ್ರ ಸರ್ಕಾರಿ ಸೇವೆ ಮತ್ತು ದಿನನಿತ್ಯದ ಮೂಲಭೂತ ಸೇವೆ ನೀಡಲು ನಗರಪಾಲಿಕೆ ಜಿಲ್ಲಾಡಳಿತ ಎಲ್ಲಾ ಸರ್ಕಾರಿ ಕಛೇರಿಗಳು ಅಂಗಡಿಮುಂಗಟ್ಟು ವ್ಯಾಪಾರಸ್ಥರಿಗೆ ಸೂಚಿಸಬೇಕು, ನಾಡಹಬ್ಬ ದಸರಾ ಸಮೀಪಿಸುತ್ತಿದ್ದು ಪ್ರವಾಸಿಗರು ಹೆಚ್ಚಾದರೆ ಕೊರೋನಾ ನಿಯಂತ್ರಿಸಲು ಕಷ್ಟಕರವಾಗುತ್ತದೆ. ಹಾಗಾಗಿ ಆರೋಗ್ಯ ಇಲಾಖೆ ಮೈಸೂರಿನ ಹೊರವರ್ತುಲ ರಸ್ತೆಗಳಲ್ಲಿ ಮಾಸ್ಕ್ ಕಡ್ಡಾಯ ಕೊರೋನಾ ಟೆಸ್ಟ್ ಕೇಂದ್ರವನ್ನು ಸ್ಥಾಪಿಸಿ ಆಗಮಿಸುವ ಪ್ರವಾಸಿಗರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ನವೀನ್ ಕೆಂಪಿ, ಸುಚೀಂದ್ರ, ಚಕ್ರಪಾಣಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: