ಪ್ರಮುಖ ಸುದ್ದಿವಿದೇಶ

‘ಹೆಪಟೈಟಿಸ್ ಸಿ ವೈರಸ್‌’ ಪತ್ತೆ ಮಾಡಿದ ಮೂವರು ಸಾಧಕರಿಗೆ ವೈದ್ಯಕೀಯ ನೊಬೆಲ್‌ ಪ್ರಶಸ್ತಿ

ಸ್ಟಾಕ್‌ಹೋಮ್‌,ಅ.5-2020ನೇ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗಿದ್ದು,  ‘ಹೆಪಟೈಟಿಸ್ ಸಿ ವೈರಸ್‌’ ಪತ್ತೆಗಾಗಿ ಮೂವರಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ಅಮೆರಿಕಾದ ಹಾರ್ವೆ ಜೆ.ಆಲ್ಟರ್‌, ಚಾರ್ಲ್ಸ್‌ ಎಂ.ರೈಸ್  ಹಾಗೂ ಬ್ರಿಟನ್ ಮೈಕೆಲ್​ ಹೋವನ್​ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೊಬೆಲ್ ಸಮಿತಿಯ ಮುಖ್ಯಸ್ಥ ಥಾಮಸ್ ಪರ್ಲ್ಮನ್ ಅವರು ಸೋಮವಾರ ಸ್ಟಾಕ್ ಹೋಮ್ ನಲ್ಲಿ 2020ನೇ ಸಾಲಿನ ವೈದ್ಯಕೀಯ ಪ್ರಶಸ್ತಿಯ ವಿಜೇತರ ಹೆಸರನ್ನು ಘೋಷಿಸಿದರು.

ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್‌ ಸ್ಪೀಡಿಶ್ ಕ್ರೊನಾ (ಅಂದಾಜು 8.22 ಕೋಟಿ ರೂ.) ಒಳಗೊಂಡಿರುತ್ತದೆ. ಕೊರೊನಾ ವೈರಸ್‌ ಸೋಂಕಿನಿಂದ ಇಡೀ ಜಗತ್ತು ಪರಿಣಾಮ ಎದುರಿಸುತ್ತಿರುವ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ ವಿಶೇಷ ಗಮನ ಸೆಳೆದಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಹೆಪಟೈಟಿಸ್ ಸಿ ವೈರಸ್‌ ಶಮನಗೊಳಿಸುವುದು ಈ ವಿಜ್ಞಾನಿಗಳ ಸಂಶೋಧನೆಗಳಿಂದ ಸಾಧ್ಯವಾಗಿದೆ. ಹೆಪಟೈಟಿಸ್‌ ಎ ಮತ್ತು ಬಿ ಸಂಶೋಧನೆಗಳ ನಂತರವೂ ದೀರ್ಘಕಾಲದವರೆಗೂ ಕಾಡುವ ಯಕೃತಿನ ಸಮಸ್ಯೆಗೆ ಪೂರ್ಣ ಪರಿಹಾರ ದೊರೆತಿರಲಿಲ್ಲ. ಹೆಪಟೈಟಿಸ್ ಸಿ ವೈರಸ್ ಕುರಿತು ಪತ್ತೆಯಾದ ನಂತರದಲ್ಲಿ ಅದಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಹಾಗೂ ಹೊಸ ಔಷಧಿಗಳ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಜನರ ಜೀವ ಉಳಿದಿದೆ.‌

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು 7 ಕೋಟಿ ಹೆಪಟೈಟಿಸ್‌ ಪ್ರಕರಣಗಳಿದ್ದು, ಪ್ರತಿ ವರ್ಷ ಹೆಪಟೈಟಿಸ್‌ ವೈರಸ್‌ನಿಂದಾಗಿ 4 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ದೀರ್ಘಾವಧಿ ಅವರೆಗೂ ಕಾಡುವ ಹೆಪಟೈಟಿಸ್‌ ಕಾಯಿಲೆಯು ಕ್ಯಾನ್ಸರ್‌ ಮತ್ತು ಯಕೃತ್ತಿನ ಸಮಸ್ಯೆ ಉಂಟು ಮಾಡುತ್ತದೆ.

ಅಕ್ಟೋಬರ್‌ 12ರ ವರೆಗೂ ಆರು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿರುವವರಿಗೆ ನೊಬೆಲ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಸಾಧನೆ ತೋರಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: